ಕೊರೊನಾ ಕೇಸ್ ಹೆಚ್ಚಾಗದಂತೆ ನೋಡಿಕೊಳ್ಳಿ

ಮಲೇಬೆನ್ನೂರು, ಜು. 17- ಅಂತರ್ ರಾಜ್ಯ, ಜಿಲ್ಲೆಗಳಿಂದ ಜನರ ಸಂಪರ್ಕ ಹೆಚ್ಚಾಗಿರುವು ದರಿಂದ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದರು. ಅವರು ಶುಕ್ರವಾರ ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಕರೆದಿದ್ದ ಕೋವಿಡ್ -19 ಕುರಿತಾದ ಅಧಿಕಾರಿಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಲೇಬೆನ್ನೂರು ಪಟ್ಟಣ ನಿನ್ನೆಯವರೆಗೆ ಕೊರೊನಾ ಮುಕ್ತವಾಗಿತ್ತು. ನಿನ್ನೆ 3 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿರುವುದರಿಂದ ಇಲ್ಲಿನ ಎಲ್ಲಾ ಇಲಾಖೆಗಳ ಜವಾಬ್ದಾರಿ ಹೆಚ್ಚಾಗಿದೆ.

ಸ್ಥಳೀಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಕೊರೊನಾ ಎದುರಿಸಲು ಇನ್ನಷ್ಟು ಸನ್ನದ್ಧರಾಗ ಬೇಕು. ಹಗಲು-ರಾತ್ರಿ ಎನ್ನದೇ ಹೋರಾಟ ಮಾಡುವುದರ ಜೊತೆಗೆ ಸಾರ್ವಜನಿಕರ ಸಹಭಾಗಿತ್ವವನ್ನು ಬಳಸಿಕೊಳ್ಳಿ. ನಿಯಮಾವಳಿ ಗಳನ್ನು ಮೀರದಂತೆ ಅನುದಾನ ಖರ್ಚು ಮಾಡಿ. ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿ ಎಂದು ತಾಕೀತು ಮಾಡಿದರು.

ಟಿಹೆಚ್‌ಓ ಡಾ. ಚಂದ್ರಮೋಹನ್ ಮಾತನಾಡಿ, 100ಕ್ಕೆ 85 ಸೋಂಕಿತರಿಗೆ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಅಂತವರನ್ನು ಗುತ್ತೂರಿನಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲು ಮಾಡಿಕೊಂಡು 5-6 ದಿನಗಳ ನಂತರ ಆರೋಗ್ಯ ನೋಡಿಕೊಂಡು ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಹರಿಹರ ತಾಲ್ಲೂಕಿನಲ್ಲಿ ಇದುವರೆಗೂ 5649 ಜನರ ಗಂಟಲು ದ್ರವ ಪರೀಕ್ಷೆ ಮಾಡಿದ್ದು, 76 ಜನರಿಗೆ ಸೋಂಕು ಕಾಣಿಸಿಕೊಂಡಿದೆ  ಎಂದು ಡಾ. ಚಂದ್ರಮೋಹನ್ ತಿಳಿಸಿದರು.

ಪೊಲೀಸ್ ವೃತ್ತ ನಿರೀಕ್ಷಕ ಶಿವಪ್ರಸಾದ್ ಮಾತನಾಡಿ, ಸದ್ಯ ನಮ್ಮಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಇರುವ ಸಿಬ್ಬಂದಿಯನ್ನು 2 ಬಫರ್ ವಲಯಗಳಿಗೆ ಒಬ್ಬರಂತೆ ನೇಮಿಸುತ್ತೇವೆ.  ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕೇಸ್ ಹಾಕುತ್ತೇವೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಉಪತಹಶೀಲ್ದಾರ್ ಆರ್. ರವಿ, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಅವರು ಕೋವಿಡ್ ವಿಚಾರವಾಗಿ ಕೈಗೊಂಡಿರುವ ಕ್ರಮಗಳನ್ನು ಸಭೆಗೆ ವಿವರಿಸಿದರು. 

ಮಾಸ್ಕ್ ಧರಿಸದೆ ಮನೆಯಿಂದ ಹೊರ ಬಂದರೆ ದಂಡ ಖಚಿತ ಎಂದು ಪಿಎಸ್ಐ ವೀರಬಸಪ್ಪ ತಿಳಿಸಿದರು.

ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಎಎಸ್ಐ ಬಸವರಾಜ್, ಪುರಸಭೆಯ ಅಧಿಕಾರಿಗಳಾದ ಗುರುಪ್ರಸಾದ್, ದಿನಕರ್, ಉಮೇಶ್, ನವೀನ್, ಇಬ್ರಾನ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

error: Content is protected !!