ದಾವಣಗೆರೆ, ಜು.17- ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ `ನಮ್ಮ ಜೀವ ಪಣಕ್ಕಿಟ್ಟು ನಡೆಸುವ ಪರೀಕ್ಷೆ ನಮಗೆ ಬೇಡ¬ ಎಂಬ ಘೋಷಣೆಗಳೊಂದಿಗೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ ಓ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಆನ್ ಲೈನ್ ಅಭಿಯಾನ ಕೈಗೊಂಡಿದ್ದಾರೆ.
ರಾಜ್ಯದ 30 ಜಿಲ್ಲೆಗಳನ್ನು ಒಳಗೊಂಡಂತೆ ಸಾವಿರಾರು ಸಂಖ್ಯೆಯಲ್ಲಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರಾಜ್ಯವ್ಯಾಪಿ ಇಂದು ‘ಅಖಿಲ ಕರ್ನಾಟಕ ಪ್ರತಿಭಟನಾ ದಿನದಲ್ಲಿ ಪಾಲ್ಗೊಂಡು `ಕೊರೊನಾ ಮಹಾಮಾರಿಯ ಸೋಂಕು ಏರುಗತಿಯಲ್ಲಿರುವಾಗ ಆನ್ ಲೈನ್ ಶಿಕ್ಷಣ ಅಥವಾ ಆನ್ ಲೈನ್ ಪರೀಕ್ಷೆ ನಮಗೆ ಬೇಡ!’ ಎಂಬ ಫಲಕಗಳೊಂದಿಗೆ ಯುಜಿಸಿ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನಿರ್ಧಾರದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯಗಳು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆನ್‍ಲೈನ್, ಆಫ್‍ಲೈನ್ ಅಥವಾ ಎರಡೂ ರೀತಿಯನ್ನು ಬಳಸಿ ಪರೀಕ್ಷೆ ಯನ್ನು ನಡೆಸಬೇಕು ಎಂದಿದೆ. ಇದರ ಬೆನ್ನಲ್ಲಿಯೇ ರಾಜ್ಯ ಸರ್ಕಾರವು ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವಂತೆ ಆದೇಶಿ ಸಿದೆ. ಅಂತೆಯೇ ದ್ವಿತೀಯ ಪಿಯು ವಿದ್ಯಾರ್ಥಿ ಗಳಿಗೆ ಇದೇ ತಿಂಗಳ ಕೊನೆಯಲ್ಲಿ ಸಿಇಟಿ ಪರೀಕ್ಷೆ ಮಾಡಲು ನಿರ್ಧರಿಸಿದೆ. ಇದು ಅತ್ಯಂತ ಅಪ್ರಜಾ ತಾಂತ್ರಿಕ ಹಾಗೂ ವಿದ್ಯಾರ್ಥಿ ವಿರೋಧಿಯಾಗಿದೆ. ಕೇವಲ ಶೇ. 33ರಷ್ಟು ಅಂತರ್ಜಾಲ ಸೌಲಭ್ಯ ಸಿಗುವ ಕುಟುಂಬಗಳು ಇರುವ ಈ ದೇಶದಲ್ಲಿ ಆನ್‍ಲೈನ್ ಶಿಕ್ಷಣ ಅಥವಾ ಆನ್‍ಲೈನ್ ಪರೀಕ್ಷೆ ಎಂಬುದು ಮೂಲದಲ್ಲಿ ಶಿಕ್ಷಣ ವಿರೋಧಿ ಕ್ರಿಯೆಯಾಗಿದೆ ಎಂದು ವಿದ್ಯಾರ್ಥಿಗಳು ಆನ್ ಲೈನ್ ಅಭಿಯಾನದಲ್ಲಿ ಆಕ್ಷೇಪಿಸಿದ್ದಾರೆ.
ಅಭಿಯಾನದಲ್ಲಿ ಸಂಘಟನೆ ರಾಜ್ಯಾಧ್ಯಕ್ಷೆ ಕೆ.ಎಸ್. ಅಶ್ವಿನಿ, ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.