ಚಿತ್ರದುರ್ಗ,ಅ.21- ನಗರದ ಮುರುಘಾ ಮಠದ ವತಿಯಿಂದ ಪ್ರತಿ ವರ್ಷ ನಡೆಯುವ ಶರಣ ಸಂಸ್ಕೃತಿ ಉತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡ ಮಾಡುವ ‘ಮುರುಘಾಶ್ರೀ’ ಪ್ರಶಸ್ತಿಗೆ ಈ ಬಾರಿ ಐವರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠದಲ್ಲಿ ನಿನ್ನೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಟ ಮುಖ್ಯಮಂತ್ರಿ ಚಂದ್ರು, ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ, ಬಸವತತ್ವ ಪ್ರಚಾರಕರಾದ ಹುಲುಸೂರು ಗುರುಬಸವೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಮದ್ಯಪಾನ ವಿರೋಧಿ ಹೋರಾಟಗಾರ್ತಿ ಸ್ವರ್ಣಾ ಭಟ್ ಹಾಗೂ ಧರ್ಮದರ್ಶಿ ಎಸ್.ಷಣ್ಮುಖಪ್ಪ ಅವರು ಗಳು ಮುರುಘಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿಗೆ ಹರಿಯಾಣದ ಜಾಹ್ನವಿ ಪನ್ವಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಹತ್ತು ಭಾಷೆಗಳಲ್ಲಿ ಮಾತನಾಡಬಲ್ಲ ಸಾಮರ್ಥ್ಯವನ್ನು 17 ವರ್ಷದ ಬಾಲಕಿ ಪನ್ಸಾರ್ ಹೊಂದಿದ್ದಾರೆ. ಮುರುಘಾಶ್ರೀ ಮತ್ತು ಭರಮಣ್ಣನಾಯಕ ಶೌರ್ಯ ಪ್ರಶಸ್ತಿಯು ತಲಾ ರೂ. 25 ಸಾವಿರ ನಗದು ಹಾಗೂ ಫಲಕವನ್ನೊಳಗೊಂಡಿದೆ. ಇದೇ ದಿನಾಂಕ 24ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಶರಣರು ವಿವರಿಸಿದರು.