ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ಬದುಕು ಅತಂತ್ರ

ದಾವಣಗೆರೆ, ಅ.21- ಕೋವಿಡ್ – 19 ನೆಪವೊಡ್ಡಿ ಹಣಕಾಸು ಇಲಾಖೆಯು ಆರ್ಥಿಕ ಮಿತವ್ಯಯ ಆದೇಶವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಅನುದಾನಿತ ಪ್ರೌಢಶಾಲೆಗಳಲ್ಲಿ ನೇಮಕಗೊಂಡ ಶಿಕ್ಷಕರ ಬದುಕು ಅತಂತ್ರ ಸ್ಥಿತಿಗೆ ತಲುಪಿದ್ದು, ಕಷ್ಟ ಹೇಳ ತೀರದಂತಾಗಿದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರುಗಳು ಅಳಲಿಟ್ಟಿದ್ದಾರೆ.

31 ಡಿಸೆಂಬರ್ 2015 ರವರೆಗೆ ರಾಜ್ಯದ ಅನುದಾನಿತ ಪ್ರೌಢಶಾಲೆಗಳಲ್ಲಿ ನಿವೃತ್ತಿ, ರಾಜೀನಾಮೆ, ಮರಣದಿಂದ ಖಾಲಿಯಾದ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿ ಸರ್ಕಾರಿ ಆದೇಶ ನೀಡಿತ್ತು. ಇಲಾಖೆಯ ಅನುಮೋದನೆಯನ್ನು ಪಡೆದ ಸಂಸ್ಥೆಗಳು ರಾಜ್ಯದ ಸುಮಾರು 500 ರಿಂದ 600 ಹುದ್ದೆಗಳಿಗೆ ಅನುಮತಿ ಪಡೆದು ಈಗಾಗಲೇ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅನುಮೋದನೆಗಾಗಿ ಇಲಾಖೆಗೆ ಕಳುಹಿಸಲಾಗಿದೆ. ಆದರೆ ಕೋವಿಡ್ -19 ನೆಪವೊಡ್ಡಿ ಹಣಕಾಸು ಇಲಾಖೆಯು ಜೂ.10, 2020ರಂದು ಆರ್ಥಿಕ ಮಿತವ್ಯಯ ಆದೇಶವನ್ನು ಹಿಂಪಡೆದ ಕಾರಣ ನಮ್ಮ ಜೀವನ ಡೋಲಾಯಮಾನವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹರಿಹರದ ಮಾರುತಿ, ದಾವಣಗೆರೆಯ ಎಸ್. ಷಣ್ಮುಖ ತಿಳಿಸಿದರು.

ವಿದ್ಯಾಗಮ ಯೋಜನೆಯ ಅನುಷ್ಠಾನದಲ್ಲೂ ಇವರು ಪಾಲ್ಗೊಳ್ಳುತ್ತಿದ್ದು, ಸಂದರ್ಶನ ನಡೆಸಿ ಅನುದಾನಕ್ಕೊಳಪಡಿಸಲು ಕಳುಹಿಸಲಾದ ಕಡತಗಳು ಕೊರೊನಾ ಹಿನ್ನೆಲೆಯಲ್ಲಿ ಬಿಇಒ, ಡಿಡಿಪಿಐ, ಜಿಲ್ಲಾ ಪಂಚಾಯಿತಿ ಮತ್ತು ಸಿಪಿಐ ಹೀಗೆ ವಿವಿಧ ಕಛೇರಿಗಳಲ್ಲಿ ಹಾಗೇ ಇವೆ. ಇಂತಹ ಶಿಕ್ಷಕರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯವಾಗಲೀ, ರಕ್ಷಣೆಯಾಗಲೀ ನೀಡುತ್ತಿಲ್ಲ. ಈ ಬಗ್ಗೆ ಸೆಷನ್ ನಲ್ಲೂ ಸಹ ಯಾವುದೇ ವಿಧಾನ ಪರಿಷತ್ ಸದಸ್ಯರೂ ಚಕಾರವೆತ್ತಿಲ್ಲ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಿದರೂ ಪರಿಹಾರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲ ಶಿಕ್ಷಕರಿಗೆ ವಯಸ್ಸು ಸಹ ಮೀರುತ್ತಿದ್ದು, ಅಂತಹ ಶಿಕ್ಷಕರ ಪಾಡು ಕೇಳುವವರೇ ಇಲ್ಲದಂತಾಗಿದೆ. ಸದ್ಯದಲ್ಲೇ ನಮ್ಮ ನೇಮಕಾತಿ ಅನುಮೋದನೆಯಾಗುತ್ತದೆ ಎಂದು ತಿಳಿದಿದ್ದ ಶಿಕ್ಷಕರ ಅನೇಕ ಕಡತಗಳು ವಿವಿಧ ಹಂತಗಳಲ್ಲಿ ನಿಂತಿರುವುದರಿಂದ ಜೀವನ ನಿರ್ವಹಣೆಯೂ ಕಷ್ಟ ಸಾಧ್ಯವಾಗುತ್ತಿದೆ. ಇತ್ತ ಶಾಲೆಗೂ ಹೋಗಲಾರದೆ ಬೇರೆ ಕೆಲಸವನ್ನು ಅವಲಂಬಿಸಲಾರದಂತಹ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನೊಂದ ಶಿಕ್ಷಕರಿಗೆ ಬೆನ್ನೆಲುಬಾಗಿ ನಿಂತು ಸಂಕಷ್ಟವನ್ನು ದೂರ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ರಾಣೇಬೆನ್ನೂರಿನ ಯು. ತಿರಕಪ್ಪ, ದಾವಣಗೆರೆ ನಾಗರತ್ನ, ನವೀನ್ ಕುಸಗೂರ ಇದ್ದರು.

error: Content is protected !!