ಕೊರೊನಾ ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣಬೇಡಿ

ಹಾಲಿವಾಣ : ಕೊರೊನಾ ವಾರಿಯರ್ಸ್‌ಗಳ ಸನ್ಮಾನ ಸಮಾರಂಭದಲ್ಲಿ ಕಾಗಿನೆಲೆ ಶ್ರೀಗಳು

ಮಲೇಬೆನ್ನೂರು, ಜು.15- ಕಣ್ಣಿಗೆ ಕಾಣದ ಹೆಮ್ಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನೇ ದಂಗು ಬಡಿಸಿದೆ. ಈ ಮಾರಕ ರೋಗದಿಂದ ಜಗತ್ತಿನ ಜನ ಮುಖ ಮುಚ್ಚಿಕೊಳ್ಳುವಂತೆ ಮಾಡಿದ್ದು, ಇದು ಪ್ರಕೃತಿ ನೀಡಿದ ಚಿಕಿತ್ಸೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹಾಲಿವಾಣ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಸಮುದಾಯ ಭವನದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ ಮತ್ತು ಕುಟುಂಬದವರು ನಿನ್ನೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ವಿಶ್ವದ ಸಮತೋಲನ ಕಾಪಾಡಲು ಈ ವಾತಾವರಣ ಸೃಷ್ಠಿಯಾಗಿದೆ. ಮನುಷ್ಯ ಇಂತಹ ಸಂಕಷ್ಟಗಳನ್ನು ಎದುರಿಸಲು ಸನ್ನದ್ಧರಾಗಬೇಕೆಂದು ಕರೆ ನೀಡಿದ ಶ್ರೀಗಳು, ಆತ್ಮಸ್ಥೈರ್ಯದಿಂದ ಕೊರೊನಾ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡೋಣ ಎಂದರು.

ಈ ರೋಗ ಜನರಲ್ಲಿ ಭಯ ಹುಟ್ಟಿಸಿದ್ದು, ಕೊರೊನಾ ಪಾಸಿಟಿವ್ ಬಂದವರನ್ನು ಅಸ್ಪೃಶ್ಯರಂತೆ ನೋಡುತ್ತಿದ್ದಾರೆ. ಇದು ತಪ್ಪಬೇಕು. ಕೊರೊನಾ ಬಗ್ಗೆ ಭಯ ಬೇಡ. ಮುಂಜಾಗ್ರತೆ ಇರಲಿ. ಕೊರೊನಾ ಬರದಂತೆ ಮನೆಮದ್ದು ಬಳಸಿ, ಬಿಸಿ ನೀರು ಕುಡಿಯಿರಿ. ಬಿಸಿ ಆಹಾರ ಊಟ ಮಾಡಿ, ದಿನಕ್ಕೆ 2 ಬಾರಿ ಉಪ್ಪು ಮಿಶ್ರಿತ ಬಿಸಿ ನೀರನ್ನು ಬಾಯಲ್ಲಿ ಹಾಕಿ ಮುಕ್ಕಳಿಸಿ, ಕಷಾಯ ಕುಡಿಯಿರಿ ಎಂದು ಸ್ವಾಮೀಜಿ ಸಲಹೆ ನೀಡಿದರು.

ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಎಂ.ನಾಗೇಂದ್ರಪ್ಪ, ಉದ್ಯಮಿ ಕುಂಬಳೂರು ವಿರೂಪಾಕ್ಷಪ್ಪ, ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸನ್ಮಾನಿತರಾದ ಮಲೇಬೆನ್ನೂರು ಪಿಎಸ್ಐ ವೀರಬಸಪ್ಪ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಮಾತನಾಡಿದರು.

ಕೊರೊನಾ ವಾರಿಯರ್ಸ್‌ಗಳಿಗೆ ಅಗತ್ಯ ಸೌಲಭ್ಯ ಹಾಗೂ ಬಡವರಿಗೆ, ನಿರ್ಗತಿಕರಿಗೆ ಫುಡ್‌ ಕಿಟ್‌ಗಳನ್ನು ನೀಡುತ್ತಿರುವ ಉದ್ಯಮಿ ನಂದಿಗಾವಿ ಶ್ರೀನಿವಾಸ್, ಉಪ ತಹಶೀಲ್ದಾರ್ ಆರ್.ರವಿ, ಕಂದಾಯ ನಿರೀಕ್ಷಕ ಸಮೀರ್, ಗ್ರಾ.ಪಂ. ಪಿಡಿಓ ರಮೇಶ್, ಗ್ರಾಮ ಲೆಕ್ಕಾಧಿಕಾರಿ ರಾಮಕೃಷ್ಣ ಮತ್ತಿತರರನ್ನಲ್ಲದೇ, ರಕ್ತದಾನಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಎಸ್.ಹನುಮಂತಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಗ್ರಾ.ಪಂ. ಆಡಳಿತಾಧಿಕಾರಿ ಪಿ.ರಂಗನಾಥ್, ಇಂಜಿನಿಯರ್ ಚಂದ್ರಶೇಖರ್ ಸ್ವಾಮಿ, ಕೆ.ಪಿ. ಗಂಗಾಧರ್, ಶ್ರೀಮತಿ ಪ್ರಮೀಳಾ ಪರಮೇಶ್ವರಪ್ಪ, ಕೆ.ರೇವಣಸಿದ್ದಪ್ಪ, ನಂದಿಗಾವಿಯ ನಾಡಿಗೇರ್ ತಿಪ್ಪಣ್ಣ, ಎಸ್.ಜಿ.ಸಿದ್ದಪ್ಪ, ನಿವೃತ್ತ ಶಿಕ್ಷಕರಾದ ಹನುಮಂತಪ್ಪ, ತಿಪ್ಪಣ್ಣ ಮತ್ತಿತರರು ಭಾಗವಹಿಸಿದ್ದರು.

ಉತ್ತಮ ಕಾರ್ಯಕ್ರಮ ಸಂಘಟಿಸಿದ್ದಕ್ಕಾಗಿ ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಭಾನುವಳ್ಳಿ ಮಹೇಂದ್ರ ಸ್ವಾಗತಿಸಿದರು. ಗ್ರಾ.ಪಂ. ಕಾರ್ಯದರ್ಶಿ ಡಿ.ಡಿ.ರೇವಣಪ್ಪ ನಿರೂಪಿಸಿದರು. ಎಸ್.ಪಿ.ಪ್ರಶಾಂತ್ ವಂದಿಸಿದರು.

error: Content is protected !!