ಪೊಲೀಸ್ ಶ್ವಾನ ತುಂಗ ನೀಡಿದ ಸುಳಿವಿನಿಂದ ಪ್ರಕರಣ ಬೇಧಿಸಿದ ಪೊಲೀಸರು
ದಾವಣಗೆರೆ, ಜು.16- ಹಣಕಾಸಿನ ವಿಚಾರವಾಗಿ ಸ್ನೇಹಿತನೇ ಯುವಕನನ್ನು ಗುಂಡಿಟ್ಟು ಹತ್ಯೆಗೈದಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿತನನ್ನು ಬಂಧಿಸಿ, ಒಂದು ಪಿಸ್ತೂಲು ಮತ್ತು ಐದು ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ತಾಲ್ಲೂಕು ನಾಗರಕಟ್ಟೆ ತಾಂಡಾದ ಚೇತನ್ (25) ಬಂಧಿತ ಆರೋಪಿ. ಈತ ನಾಗರಕಟ್ಟೆ ಗ್ರಾಮದ ತನ್ನ ಸ್ನೇಹಿತ ಕೆ. ಚಂದ್ರನಾಯ್ಕ (25) ನನ್ನು ಕೊಲೆಗೈದಿದ್ದ.
ಘಟನೆ ಹಿನ್ನೆಲೆ: ಬಂಧಿತ ಆರೋಪಿ ಚೇತನ್ ಮತ್ತು ಈತನ ಸಹಚರರು ಈ ಹಿಂದೆ ಧಾರವಾಡ ನಗರದಲ್ಲಿ ಮನೆಗಳ್ಳತನ ಮಾಡಿಕೊಂಡು ಬಂದಿರುವ ವಿಷಯ ಕೊಲೆಯಾಗಿರುವ ಚಂದ್ರ ನಾಯ್ಕನಿಗೆ ಗೊತ್ತಾಗಿತ್ತು. ಅಲ್ಲದೆ, ಈತ ಚೇತನ್ಗೆ 1.70 ಲಕ್ಷ ರೂ.ಗಳನ್ನು ಕೈಗಡವಾಗಿ ಸಾಲ ಸಹ ನೀಡಿದ್ದ. ಕೊಟ್ಟ ಸಾಲವನ್ನು ವಾಪಾಸ್ ಕೇಳಿದ್ದ ಚಂದ್ರ ನಾಯ್ಕ, ಕಳ್ಳತನ ಮಾಡಿಕೊಂಡು ಬಂದಿರುವ ನಗ ನಾಣ್ಯದಲ್ಲಿ ತನಗೂ ಪಾಲು ನೀಡಬೇಕು. ಇಲ್ಲದಿದ್ದರೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಬೆದರಿಸಿದ್ದ.
ಕೊಲೆ ಸುಳಿವು ನೀಡಿದ ‘ತುಂಗ’ : ಪ್ರಕರಣ ಪತ್ತೆಗಾಗಿ ಚನ್ನಗಿರಿ ಉಪ ವಿಭಾಗದ ಡಿವೈಎಸ್ಪಿ ಪ್ರಶಾಂತ್ ಜಿ. ಮುನ್ನೋಳಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸ ಲಾಗಿತ್ತು. ಈ ತಂಡವು ಪೊಲೀಸ್ ಶ್ವಾನ ತುಂಗ ನೀಡಿದ ಸುಳಿವು ಆಧರಿಸಿ ಕೊಲೆ ಪ್ರಕರಣ ಬೇಧಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಪೊಲೀಸ್ ಅಪರಾಧ ವಿಭಾಗದ ಹೆಣ್ಣು ಶ್ವಾನ ಒಂಭತ್ತು ವರ್ಷದ ತುಂಗ, ಘಟನೆ ನಡೆದ ಸ್ಥಳದಲ್ಲಿ ಮೃತ ದೇಹದ ವಾಸನೆ ಹಿಡಿದು ಸುಮಾರು 11 ಕಿ.ಮೀ. ಸಂಚರಿಸಿ ಕಾಶಿಪುರದಲ್ಲಿ ಅಡಗಿದ್ದ ಆರೋಪಿ ಚೇತನ್ ನನ್ನು ಪತ್ತೆ ಹಚ್ಚಿತ್ತು. ಶ್ವಾನ ತುಂಗ ಡಾಬರ್ ಮನ್ ತಳಿಯಾಗಿದ್ದು, ಈ ಹಿಂದೆಯೂ ಸಹ ಅನೇಕ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ನಮ್ಮಲ್ಲಿ ಒಟ್ಟು 4 ಶ್ವಾನಗಳಿದ್ದು, ಎರಡನ್ನು ಬಾಂಬ್ ಪತ್ತೆ ದಳಕ್ಕೆ, ಮತ್ತೆರಡನ್ನು ಅಪರಾಧ ಪತ್ತೆ ಹಚ್ಚಲು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಆದ್ದರಿಂದ ಈತನನ್ನು ಹಾಗೆಯೇ ಬಿಟ್ಟರೆ ತಾವು ಮಾಡಿರುವ ಕಳ್ಳತನ ಬಯಲಾಗುತ್ತದೆ ಎಂಬ ಭಯದಿಂದ ಚಂದ್ರ ನಾಯ್ಕನನ್ನು ಜುಲೈ 10 ರ ರಾತ್ರಿ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಬಳಿಯ ಗುಡ್ಡದಲ್ಲಿರುವ ನಿರ್ಜನ ಪ್ರದೇಶಕ್ಕೆ ಉಪಾಯವಾಗಿ ಕರೆಸಿಕೊಂಡ ಚೇತನ್, ತನ್ನ ಸಹಚರರ ಜೊತೆ ಧಾರವಾಡದಿಂದ ಕಳ್ಳತನ ಮಾಡಿ ತಂದಿದ್ದ ಪಿಸ್ತೂಲಿನಿಂದ ಚಂದ್ರನಾಯ್ಕನ ತಲೆಗೆ ಗುಂಡಿಟ್ಟು ಕೊಂದು ಮೃತ ದೇಹವನ್ನು ಅಲ್ಲಿಯೇ ಬಿಸಾಕಿ ಪರಾರಿಯಾಗಿದ್ದರು.
ಚಂದ್ರನಾಯ್ಕ ಕೊಲೆಯಾದ ಬಗ್ಗೆ ಮೃತನ ಸೋದರ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಮೂರರಿಂದ ನಾಲ್ಕು ಜನ ಭಾಗಿಯಾಗಿರುವ ಶಂಕೆ ಇದ್ದು, ಅವರುಗಳ ಪತ್ತೆ ಕಾರ್ಯಕ್ಕೆ ಬಲೆ ಬೀಸಲಾಗಿದೆ ಎಂದು ಎಸ್ಪಿ ಹನುಮಂತರಾಯ ಇಂದು ಸಂಜೆ ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರೋಪಿ ಚೇತನ್ ಮತ್ತು ಸಹಚರರು ಈ ಹಿಂದೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಸ್ತೂಲ್ ಕಳ್ಳತನ ಸೇರಿದಂತೆ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.
ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಜಿ. ಮುನ್ನೋಳಿ ನೇತೃತ್ವದ ತಂಡದಲ್ಲಿನ ಸಿಪಿಐ ಆರ್.ಆರ್. ಪಾಟೀಲ್, ಸಂತೇಬೆನ್ನೂರು ಪಿಎಸ್ಐ ಎಸ್.ಎಸ್.ಮೇಟಿ, ಬಸವಾಪಟ್ಟಣ ಠಾಣೆ ಪಿಎಸ್ಐ ಭಾರತಿ ಕಂಕಣವಾಡಿ, ಚನ್ನಗಿರಿ ಪಿಎಸ್ಐ ರೂಪ್ಲಿ ಬಾಯಿ, ಸಿಬ್ಬಂದಿಗಳಾದ ರುದ್ರೇಶ್ ಎಂ, ರುದ್ರೇಶ್ ಎಸ್.ಆರ್, ಧರ್ಮಪ್ಪ, ಮಹೇಶ ನಾಯ್ಕ, ಮಂಜಾ ನಾಯ್ಕ, ರವಿಕುಮಾರ್, ಬಸವರಾಜ ಕೊಟ್ಟೆಪ್ಪನವರ್, ರವಿ, ನಾಗರಾಜ್ ತಳವಾರ ಪ್ರಕರಣ ಬೇಧಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ರಾಜೀವ್, ಡಿವೈಎಸ್ಪಿ ಪ್ರಶಾಂತ್ ಹಾಗೂ ಇತರರು ಇದ್ದರು.