ಮಲೇಬೆನ್ನೂರಿನಲ್ಲಿ ಖಾತೆ ತೆರೆದ ಕೊರೊನಾ: ಇಬ್ಬರಿಗೆ ಸೋಂಕು

ಮಲೇಬೆನ್ನೂರು, ಜು. 16- ಇದುವರೆಗೂ ಕೊರೊನಾ ಮುಕ್ತವಾಗಿದ್ದ ಮಲೇಬೆನ್ನೂರು ಪಟ್ಟ ಣದಲ್ಲಿ ಗುರುವಾರ ಎರಡು ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಪಟ್ಟಣದ ಜನತೆ ಆತಂಕಗೊಂಡಿದ್ದಾರೆ.

ಪೊಲೀಸ್‌ಗೆ ಪಾಸಿಟಿವ್: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್‌ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರು ನಿನ್ನೆ ರಾತ್ರಿ ನೈಟ್ ಡ್ಯೂಟಿ ಮಾಡಿದ್ದರು ಎನ್ನಲಾಗಿದೆ.

ಹರಿಹರ ನಗರದಲ್ಲಿ ವಾಸವಾಗಿರುವ ಇವರು, ಕಳೆದ 6ನೇ ತಾರೀಖು ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು. ನಂತರ ಅವರು ಹರಿಹರ ನಗರದ ಕಂಟೈನ್‌ಮೆಂಟ್‌ ಏರಿಯಾದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಬುಧವಾರ ಅವರನ್ನು ಕಂಟೈನ್‌ ಮೆಂಟ್‌ ಡ್ಯೂಟಿಯಿಂದ ಬದಲಾವಣೆ ಮಾಡಿದ್ದರಿಂದ ಬುಧವಾರ ರಾತ್ರಿ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ನೈಟ್ ಡ್ಯೂಟಿ ಮಾಡಿ ಗುರುವಾರ ಬೆಳಿಗ್ಗೆ ಹರಿಹರದಲ್ಲಿರುವ ಮನೆಗೆ ತೆರಳಿ ವಿಶ್ರಾಂತಿಯಲ್ಲಿದ್ದಾಗ ಕೊರೊನಾ  ಪರೀಕ್ಷಾ ವರದಿ ಪಾಸಿಟಿವ್ ಬಂದಿರುವ ವಿಷಯ ತಿಳಿದಿದೆ. ಆದರೆ ಅವರು  ಆರೋಗ್ಯವಾಗಿದ್ದು, ಪ್ರತಿ ದಿನ ಕರ್ತವ್ಯ ನಿರ್ವಹಿಸಿದ್ದಾರೆ.

ಸಿಬ್ಬಂದಿಗೆ ಕ್ವಾರಂಟೈನ್‌ : ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ಸೋಂಕಿತ ಪೊಲೀಸ್ ಅವರ ಜೊತೆ ಕರ್ತವ್ಯ ನಿರ್ವಹಿಸಿದ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‌ ಮಾಡಿದ್ದು, ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಪಿ.ಎಸ್.ಐ. ವೀರಬಸಪ್ಪ ತಿಳಿಸಿದ್ದಾರೆ.

ಬಾಣಂತಿಗೆ ಕೊರೊನಾ: ಇಲ್ಲಿನ ಇಂದಿರಾ ನಗರದ 10ನೇ ವಾರ್ಡಿನ 25 ವರ್ಷದ ಬಾಣಂತಿಗೆ ಕೊರೊನಾ ದೃಢಪಟ್ಟಿದೆ.  ವಿಶೇಷ ಅಂದರೆ ಕಳೆದ 4ನೇ ತಾರೀಖು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದ ಮಹಿಳೆ ಆಗ ಗರ್ಭಿಣಿಯಾಗಿದ್ದರು.

6ನೇ ತಾರೀಖು ಹೆರಿಗೆಗೆಂದು ದಾವಣಗೆರೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಹೆರಿಗೆಯಾದ ನಂತರ ದಾವಣಗೆರೆಯ ಅಜಾದ್ ನಗರದಲ್ಲಿರುವ ತವರು ಮನೆಗೆ ಹೋಗಿದ್ದಾರೆ. ಬುಧವಾರ ಕೊರೊನಾ ಟೆಸ್ಟ್ ವರದಿ ಪಾಸಿಟಿವ್ ಬಂದಿರುವುದರಿಂದ ಮಲೇಬೆನ್ನೂರಿನಲ್ಲಿರುವ ಅವರ ಗಂಡನೆ ಮನೆಯನ್ನು ಸೀಲ್ ಡೌನ್‌ ಮಾಡಿ, ಅಕ್ಕ ಪಕ್ಕದ ಮೂರ್ನಾಲ್ಕು ಮನೆಯವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಸೋಂಕಿತ ಬಾಣಂತಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಅಂತ್ಯಕ್ರಿಯೆ ನೆರವೇರಿದ ಮೇಲೆ ಬಂದ ವರದಿ: 10ನೇ ವಾರ್ಡಿನ ಮೇದೂರು ಗಲ್ಲಿಯ 43 ವರ್ಷದ ಮಹಿಳೆಯೊಬ್ಬರು ಅಸ್ತಮಾ ಕಾಯಿಲೆಯಿಂದಾಗಿ ದಾವಣಗೆರೆಯ ಖಾಸಗಿ ಆಸ್ಪತ್ರಗೆ ದಾಖಲಾಗಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಆ ಮಹಿಳೆ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೃತ ದೇಹವನ್ನು ಮನೆಗೆ ತರದೆ ನೇರವಾಗಿ ಖಬರಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಂದೇ ಅವರ ಅಂತ್ಯಕ್ರಿಯೆಯನ್ನು ನೇರವೇರಿಸಲಾಗಿತ್ತು.  ಆಸ್ಪತ್ರೆಗೆ  ದಾಖಲಾದ ಸಂದರ್ಭದಲ್ಲಿ ಅವರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅದರ ವರದಿ ಗುರುವಾರ ಬಂದ ಕಾರಣ ಮೃತ ಮಹಿಳೆಯ ಮನೆ ಸೇರಿದಂತೆ ನಾಲ್ಕು ಮನೆಗಳನ್ನು ಸೀಲ್ ಡೌನ್‌ ಮಾಡಿ, ಮನೆಯವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ಕಾರ್ಯೋನ್ಮುಖರಾದ ಅಧಿಕಾರಿಗಳು: ಪಾಸಿಟಿವ್ ಪ್ರಕರಣಗಳ ಮಾಹಿತಿ ಬಂದ ತಕ್ಷಣ ಕಾರ್ಯೋನ್ಮುಖರಾದ ಉಪ ತಹಶೀಲ್ದಾರ್ ಆರ್.ರವಿ, ವೈದ್ಯಾಧಿಕಾರಿ ಡಾ.ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಡಾ.ನಿಸಾರ್ ಅಹಮದ್, ಪುರಸಭೆ ಅಧಿಕಾರಿಗಳಾದ ಗುರುಪ್ರಸಾದ್, ಉಮೇಶ್, ನವೀನ್, ಆರೋಗ್ಯ ಕೇಂದ್ರದ ಕಿರಣ್, ಕಾಜಲ್ ಕಿರಣ್, ಯಾಸ್ಮೀನ್ ಬಾನು, ಪುರಸಭೆ ಸದಸ್ಯರಾದ ಯಸೂಫ್ ಹಾಗೂ ಪುರಸಭೆಯ ಪೌರ ಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮೂರು ಸ್ಥಳಗಳಿಗೆ ತೆರಳಿ, ಮನೆಯವರಿಗೆ ಮತ್ತು ಅಕ್ಕ ಪಕ್ಕದ ಮನೆಯವರಿಗೆ ಆತ್ಮಸ್ಥೈರ್ಯ ತುಂಬಿ ಹೋಂ ಕ್ವಾರಂಟೈನ್‌ಗೆ ಸೂಚಿಸಿದರು.

ಉಲ್ಟಾ ಕೇಸ್: ಈ ಹಿಂದೆ ಇಬ್ಬರು ವ್ಯಕ್ತಿಗಳು ದಾವಣಗೆರೆಯಲ್ಲಿ ಕೊರೊನಾ ಟೆಸ್ಟ್‌ಗೆ ಕೊಟ್ಟ ನಂತರ ಕಾರ್ಯ ನಿಮಿತ್ತ ಮಲೇಬೆನ್ನೂರಿಗೆ ಬಂದಿದ್ದ ಸಂದರ್ಭದಲ್ಲಿ ಅವರ ಪರೀಕ್ಷಾ ವರದಿ ಪಾಸಿಟಿವ್ ಬಂದಿದ್ದವು. ಆ ವೇಳೆಯಲ್ಲಿ ಪಟ್ಟಣದ ಜನ ಕೆಲ ಹೊತ್ತು ಆತಂಕಗೊಂಡಿದನದ್ನು ಇಲ್ಲಿ ಸ್ಮರಿಸಬಹುದು. ಇದೀಗ ಮಲೇಬೆನ್ನೂರಿನ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದರೂ ಒಬ್ಬರು ಹರಿಹರದಲ್ಲಿ ಮತ್ತೊಬ್ಬರು ದಾವಣಗೆರೆಯಲ್ಲಿದ್ದಾರೆ. ಈ ಎರಡೂ ಘಟನೆಗಳು ಉಲ್ಟಾ ಆಗಿರುವುದು ವಿಶೇಷ.

ತಡವಾದ ಪರಿಕ್ಷಾವರದಿ: ಕೊರೊನಾ ಟೆಸ್ಟ್ ವರದಿಗಳು  ಬಹಳ ತಡವಾಗಿ ಬರುತ್ತಿದ್ದು, ಟೆಸ್ಟ್‌ಗೆ ಒಳಗಾದ ವರನ್ನು ಹೋಂ ಕ್ವಾರಂಟೈನ್‌ ಮಾಡದೇ ಹೊರಗಡೆ ಓಡಾಡಲು ಬಿಟ್ಟಿರುವುದರಿಂದ ಕೊರೊನಾ ಸಮುದಾಯಕ್ಕೆ ಹರಡಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಲಾದರೂ ಜಿಲ್ಲಾಡಳಿತ ಕೊರೊನಾ ಟೆಸ್ಟ್ ಮಾಡಿಸುವುದನ್ನು ಚುರುಕುಗೊಳಿಸಬೇಕು ಮತ್ತು ಟೆಸ್ಟ್‌ಗೆ ಒಳಗಾದವರನ್ನು ಅವರ ಪರೀಕ್ಷಾ ವರದಿ  ಬರುವವರೆಗೂ ಹೋಂ ಕ್ವಾರಂಟೈನ್‌ಗೆ ಸೂಚಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

error: Content is protected !!