ವಿಜಯದಶಮಿ, ಈದ್ ಮಿಲಾದ್ : ಮೆರವಣಿಗೆ ನಿಷೇಧ

ಹರಿಹರ, ಅ.21- ಕೋವಿಡ್-19 ರೋಗವು ಹರಡುವಿಕೆ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ನಗರದಲ್ಲಿ ಇದೇ ದಿನಾಂಕ 26 ರಂದು ನಡೆಯುವ ವಿಜಯ ದಶಮಿ ಮತ್ತು ಈದ್ ಮಿಲಾದ್ ಹಬ್ಬವನ್ನು ಧಾರ್ಮಿಕ ವಿಧಿ, ವಿಧಾನಗಳಿಗೆ ಚ್ಯುತಿ ಬರದಂತೆ ಸಾಮೂಹಿಕ ಮೆರವಣಿಗೆ ಇಲ್ಲದೆ ಸರಳವಾಗಿ ಮತ್ತು ಸರ್ಕಾರದ ಆದೇಶ ಪಾಲನೆ ಮಾಡುವ ಮೂಲಕ ಆಚರಣೆ ಮಾಡುವಂತೆ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಹೇಳಿದರು.

ನಗರ ಪೊಲೀಸ್ ಠಾಣೆಯ ಆವರಣದಲ್ಲಿ ದಸರಾ ಮತ್ತು ಈದ್ ಮಿಲಾದ್ ಹಬ್ಬದ ನಿಮಿತ್ತ ಇಂದು ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೋವಿಡ್-19 ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೋ ವಿಡ್- 19ರ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು  ಸರ್ಕಾರವು ನಿರ್ಧರಿಸಿರು ವುದರಿಂದ ಈ ಎರಡು ಹಬ್ಬದ ಸಮಯದಲ್ಲಿ ನಡೆಯುವ ಸಾಮೂಹಿಕ ಮೆರವಣಿಗೆಯನ್ನು ನಿಷೇಧ ಮಾಡಲಾಗಿದೆ ಎಂದು ಅವರು ಹೇಳಿದರು.

ದೇವಸ್ಥಾನ ಮತ್ತು ಮಸೀದಿ ಒಳಗಡೆ ನಡೆಯುವ ಧಾರ್ಮಿಕ ವಿಧಿ, ವಿಧಾನಗಳ ಮತ್ತು ವಿಶೇಷ ಪೂಜೆ ಸಮಯದಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಜನರು ಸೇರದಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು. ಮಾಸ್ಕ್ ಧರಿಸಬೇಕು, 6 ಅಡಿ ಅಂತರವನ್ನು ಕಾಯ್ದುಕೊಳ್ಳುವುದು. ಸಾಮೂಹಿಕ ಪ್ರಾರ್ಥನೆ, ಪ್ರವಚನ ಮುಂತಾದವುಗಳನ್ನು ಆಯೋಜಿಸು ವಂತಿಲ್ಲ ಎಂದು ಅವರು ತಿಳಿಸಿದರು.  

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ನಮ್ಮ ದಸರಾ ಉತ್ಸವ ಸಮಿತಿ ವತಿಯಿಂದ ಕಳೆದ 15 ವರ್ಷಗಳಿಂದ ಸಡಗರ, ಸಂಭ್ರಮದಿಂದ ದಸರಾ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರತಿ ದಿನ ಪೂಜೆ, ಪುನಸ್ಕಾರ ಮಾಡಿ ಸರಳವಾಗಿ ಆಚರಣೆ ಮಾಡುವುದಕ್ಕೆ ಮುಂದಾಗಿದ್ದೇವೆ. ಬನ್ನಿ ಮುಡಿಯುವ ದಿನ ಶ್ರೀ ಕ್ಷೇತ್ರನಾಥ ಹರಿಹರೇಶ್ವರ ಸ್ವಾಮಿ ಜೊತೆಯಲ್ಲಿ ನಮ್ಮ ದುರ್ಗಾದೇವಿ ಮೂರ್ತಿಯನ್ನು ತೆಗೆದು ಕೊಂಡು ಹೋಗಿ ಬನ್ನಿ ಮುಡಿಯುವ ಕಾರ್ಯ ವನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ಐ ಎಸ್ ಶೈಲಾಶ್ರೀ, ಗುತ್ತೂರು ಠಾಣೆಯ ಪಿಎಸ್ಐ ಡಿ‌. ರವಿಕುಮಾರ್, ನಗರಸಭೆ ಸದಸ್ಯರಾದ ಮುಜಾಮಿಲ್, ಇಬ್ರಾಹಿಂ, ಬಾಷಾ, ವರ್ತಕರ ಸಂಘದ ಬಸವರಾಜಪ್ಳ ಹಲಸಬಾಳು, ಮಹಮದ್ ಫೈರೋಜ್, ಬೀರಪ್ಪ ಹಾಗು ಇತರರು ಹಾಜರಿದ್ದರು.

error: Content is protected !!