ದಾವಣಗೆರೆ, ಅ. 20- ಕೇಂದ್ರ ಸರ್ಕಾರದ ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ಖಂಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ಕಿಸಾನ್ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮಿಗಾ ಹೇಳಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳು 7 ಅಥವಾ 8ನೇ ತಾರೀಖಿನಿಂದ ರಾಹುಲ್ ಗಾಂಧಿಯವರು ಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಹುಬ್ಬಳ್ಳಿ-ಬೆಳಗಾಂ, ದಾವಣಗೆರೆ-ಚನ್ನಗಿರಿ-ಕಾಸರಗೋಡು, ಅಥವಾ ಬೀದರ್-ಗುಲಬರ್ಗ ಮಾರ್ಗ ಸೇರಿದಂತೆ 3 ಮಾರ್ಗಗಳಲ್ಲಿ ಯಾವುದಾದರೊಂದು ಮಾರ್ಗದಲ್ಲಿ ಯಾತ್ರೆ ನಡೆಯಲಿದ್ದು, ಮುಖಂಡರು ಪರಿಶೀಲಿಸಲಿದ್ದಾರೆ ಎಂದು ಸಚಿನ್ ಮಿಗಾ ತಿಳಿಸಿದರು.
ನರೇಂದ್ರ ಮೋದಿ ಪ್ರಧಾನಿ ಆದಾಗಿನಿಂದ ನೋಟು ಅಮಾನ್ಯೀಕರಣದಿಂದ ಹಿಡಿದು ಎಪಿಎಂಸಿ ಸೇರಿದಂತೆ ವಿವಿಧ ಕಾಯ್ದೆಗಳನ್ನು ರೂಪಿಸುವ ಮೂಲಕ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಎಪಿಎಂಸಿ ಕಾಯ್ದೆಯಿಂದ ರೈತರಿಗೆ ತಾತ್ಕಾ ಲಿಕ ಅಂದರೆ 12-16 ತಿಂಗಳವರೆಗೆ ಲಾಭದಾ ಯಕವಾಗ ಬಹುದು. ಆದರೆ, ಈ ಮಸೂದೆ ಯಿಂದ ಎಪಿಎಂಸಿಗಳು ನೆನೆಗುದಿಗೆ ಬೀಳುತ್ತವೆ. ವರ್ಷದ ನಂತರ ಮಾರುಕಟ್ಟೆ ಹೊರಗೆ ಖರೀದಿ ಸುತ್ತಿರುವ ಖರೀದಿದಾರರು ರೈತರ ಶೋಷಣೆಗೆ ನಿಲ್ಲುತ್ತಾರೆ. ಆಗ ರೈತರು ಮತ್ತೆ ಎಪಿಎಂಸಿಯತ್ತ ಮುಖ ಮಾಡಲು ಎಪಿಎಂಸಿಗಳೇ ಇರುವುದಿಲ್ಲ. ಎಪಿಎಂಸಿಗಳು ಬಂದ್ ಆದರೆ ಅನಿವಾರ್ಯವಾಗಿ ರೈತರು ಉದ್ಯಮಿಗಳ ಗುಲಾಮರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ರಫೇಲ್ ಹಗರಣಕ್ಕಿಂತ ಅತಿ ದೊಡ್ಡ ಹಗರಣವಾಗಿದೆ. ರೈತರ ಹಿತಕ್ಕಾಗಿ ಬೆಳೆ ವಿಮೆ ಇದೆ. ಆದರೆ, ಕೇಂದ್ರ ಸರಕಾರ ಅದಾನಿ ಸಮೂಹ ಸಂಸ್ಥೆ ಮತ್ತು ರಿಲಯನ್ಸ್‌ನ ಮಾಲೀಕ ಅನಿಲ್ ಅಂಬಾನಿ ಅವರಿಗೆ ಸಹಾಯ ಮಾಡುವ ನಿಟ್ಟಿನಿಂದ ವಿಮಾ ಕಂಪನಿ ಹೆಸರಿನಲ್ಲಿ ರೈತರ ಬೆಳೆ ವಿಮೆ ಯೋಜನೆ ತಂದು ಸಾವಿರಾರು ಕೋಟಿ ರೂ.ಗಳ ಲಾಭ ಮಾಡಿಕೊಟ್ಟಿದ್ದಾರೆ ಎಂದು ಮಿಗಾ ಹೇಳಿದರು.
ಸಂಸದರಿಗೆ ಮನವಿ: ಇಂಡಿಯನ್ ಮೋಟಾರ್ ಬೈಕ್ ಆಕ್ಟ್ ನಲ್ಲಿ ವಾಹನಗಳ ಭಾಗಗಳಿಗೆ ಹಾನಿಯಾದರೆ ಪರಿಹಾರ ನೀಡುವಂತೆ ರೈತರ ಬೆಳೆಗೂ ಅದೇ ಮಾನದಂಡದಲ್ಲಿ ಪರಿಹಾರ ನೀಡುವಂತೆ ನಿಯಮದಲ್ಲಿ ತಿದ್ದುಪಡಿ ಮಾಡಲು ಒತ್ತಾಯಿಸುವಂತೆ ರಾಜ್ಯದ ಸಂಸದರಲ್ಲಿ ಅವರು ಇದೇ ವೇಳೆ ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಗ್ರಾಹಕರು ಇಟ್ಟಿರುವ ಠೇವಣಿಯನ್ನೂ ಬಳಸಿಕೊಂಡು ಶಕ್ತಿಹೀನ ಬ್ಯಾಂಕುಗಳನ್ನು ಉತ್ತೇಜಿಸಲು ಮುಂದಾಗುವ ಎಫ್‌ಎಸ್‌ಡಿಆರ್ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಿರುವುದು ದುರಂತ ಎಂದು ಹೇಳಿದರು.
ಕೇಂದ್ರದ ಧೋರಣೆ ವಿರುದ್ಧ ಜಿಲ್ಲೆಯಲ್ಲಿ ಸಹಿ ಸಂಗ್ರಹಿಸಿ ರಾಜ್ಯಪಾಲರಿಗೆ ಕಳುಹಿಸುವ ವ್ಯವಸ್ಥೆ ನಡೆಯುತ್ತಿದ್ದು, ಚಳವಳಿಯು ಪ್ರಧಾನ ಮಂತ್ರಿ ನಿವಾಸ ತಲುಪುವವರೆಗೂ ಮುಂದುವರೆಯುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ್, ದಿನೇಶ್ ಕೆ.ಶೆಟ್ಟಿ, ಮನೋಜ್ ರಾಜ್, ಪ್ರವೀಣ್ ಕುಮಾರ್, ಶಿವಕುಮಾರ್ ಇತರರು ಉಪಸ್ಥಿತರಿದ್ದರು.