ದುಡಿಮೆಗೆ ತಕ್ಕಂತೆ ವೇತನವಿಲ್ಲವೆಂದು ಹೋರಾಟ

ಬ್ಯಾಂಕ್ ಪಾಸ್ ಬುಕ್ ಪ್ರದರ್ಶಿಸಿ ಆಶಾ ಕಾರ್ಯಕರ್ತೆಯರ ಅಸಮಾಧಾನ 

ದಾವಣಗೆರೆ, ಜು.14- ತಮಗೆ ಮಾಸಿಕ 12 ಸಾವಿರ ರೂ. ಗೌರವ ಧನ ಖಾತರಿಪಡಿಸಬೇಕೆಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ಕೈಗೊಂಡಿರುವ ಅನಿರ್ದಿಷ್ಟ ಹೋರಾಟ ಮುಂದುವರೆದಿದೆ.

ಇಂದೂ ಸಹ ಆರೋಗ್ಯ ಸೇವೆ ಸ್ಥಗಿತಗೊಳಿಸಿ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಇಂದು ಜಮಾಯಿಸಿದ್ದ ಆಶಾ ಕಾರ್ಯಕರ್ತೆಯರು ತಮ್ಮ ದುಡಿಮೆಗೆ ತಕ್ಕಂತೆ ವೇತನ ಸಿಗುತ್ತಿಲ್ಲವೆಂದು ತಮ್ಮ ಬ್ಯಾಂಕ್ ಪಾಸ್ ಬುಕ್ ಪ್ರದರ್ಶಿಸಿ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷತಾ ಸಾಮಗ್ರಿಗಳನ್ನು ನೀಡಬೇಕು. ಸೋಂಕಿಗೆ ಒಳಗಾದ ಆಶಾಗೆ ಪರಿಹಾರ ಮತ್ತು ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕೆಂಬ ಕೊರೊನಾ ವಾರಿಯರ್ಸ್‍ಗಳಾದ ನಮ್ಮ ನ್ಯಾಯಯುತ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳು ಸ್ಪಂದಿಸಬೇಕು. ಈ ಮೂಲಕ ನಿಜವಾಗಿಯೂ ಜನಪರ ಆರೋಗ್ಯದ ಕಾಳಜಿ ಯನ್ನು ತೋರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷೆ ಭಾರತಿ, ಶಕುಂತಲಾ, ನಾಗರತ್ನ, ರತ್ನಮ್ಮ, ನಾಗವೇಣಿ, ಮುಬೀನಾ, ಉಮ್ಮೇಸಲ್ಮಾ, ನಾಜೀಮ, ಜುಬೇದಾ, ಶೈಲಾ, ಯಶೋಧ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

error: Content is protected !!