ಉಸಿರಿರುವುದರೊಳಗೆ ಹೆಸರುಳಿಯುವ ಕೆಲಸ ಮಾಡಬೇಕು

ದೇವರಗುಡ್ಡದ ಕಾರ್ಯಕ್ರಮದಲ್ಲಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹಿತನುಡಿ

ರಾಣೇಬೆನ್ನೂರು, ಅ. 20 – ಕಷ್ಟ ಕಾಲದಲ್ಲಿ ಸಹಾಯ ಮಾಡುವವರು ಸದಾ ಕಾಲವೂ ನೆನಪಿನಲ್ಲಿರುತ್ತಾರೆ. ಉಸಿರು ನಿಲ್ಲುವುದರೊಳಗೆ ಹೆಸರು ಉಳಿಯುವಂತೆ ಕೆಲಸ ಮಾಡಬೇಕು ಎಂದು ಹರಿಹರ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ನುಡಿದರು.

ದೇವರಗುಡ್ಡದ ಶ್ರೀ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಪೂಜಾರ ಅವರು ಗ್ರಾಮಕ್ಕೆ ನೀಡಿದ ಉಚಿತ ಅಂಬ್ಯುಲೆನ್ಸ್‍ಗೆ ಚಾಲನೆ ನೀಡಿ ಶ್ರೀಗಳು ಉಪದೇಶಿಸುತ್ತಿದ್ದರು.

ಜನಪರ ಕೆಲಸ ಮಾಡುವಲ್ಲಿ ನಿಂದನೆಗಳು ಸಾಮಾನ್ಯ. ಅವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ನಿಮ್ಮ ಕೆಲಸಗಳನ್ನ ಸಾಕಾರಗೊಳಿಸಿಕೊಳ್ಳಬೇಕು. ಆ ನಿಂದಕರಿಂದ ನಿಮ್ಮ ಕೆಲಸಗಳಿಗೆ ಮಹತ್ವ ಹೆಚ್ಚುತ್ತದೆ ಎಂದು ಶ್ರೀಗಳು ಹೇಳಿದರು.

ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ನಾಣ್ಣುಡಿಯನ್ನು, ದೇವರಗುಡ್ಡ ಹಾಗೂ ಸುತ್ತಲಿನ ಗ್ರಾಮಗಳ ಜನತೆಯ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವ ಸಂತೋಷ ಪೂಜಾರ ಅವರ ಅಂಬ್ಯುಲೆನ್ಸ್ ಕೊಡುಗೆ ಸುಳ್ಳಾಗಿಸಿದೆ ಎಂದು ಶ್ರೀಗಳು ಸಭಿಕರ ಕರತಾಡನದ ಮಧ್ಯೆ ನುಡಿದರು.

ಶಾಸಕ ಅರುಣಕುಮಾರ ಪೂಜಾರ ಮಾತನಾಡಿದರು.

ಆಪತ್ ಕಾಲದಲ್ಲಿ ಸಾರಿಗೆ ವ್ಯವಸ್ಥೆ ದೊರಕದ್ದರಿಂದ ಹೃದಯ ಬೇನೆಯಿಂದ ನರಳಿದ ನನ್ನ ತಾಯಿಯನ್ನು ಉಳಿಸಿಕೊಳ್ಳಲು ನನ್ನಿಂದ ಆಗಲಿಲ್ಲ. ಅಂದು ನನಗಾದ ನೋವು ಈ ಭಾಗದ ಜನರಿಗೆ ಆಗಬಾರದು ಎಂದು ಉಚಿತವಾಗಿ ಅಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿರುವುದಾಗಿ ಸಂತೋಷ ಭಟ್ ಪೂಜಾರ ಹೇಳಿದರು.

ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಪಂಚಮಸಾಲಿ ಪೀಠದ ಧರ್ಮದರ್ಶಿ ಹರಿಹರದ  ಚಂದ್ರಶೇಖರ್ ಪೂಜಾರ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!