ದಾವಣಗೆರೆ, ಜು.14- ಮುಂಬೈನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ರಾಜಗೃಹಕ್ಕೆ ಕಳೆದ ವಾರ ನುಗ್ಗಿ ಸಿಸಿ ಕ್ಯಾಮೆರಾ, ಕಿಟಕಿ ಗಾಜುಗಳು, ಉದ್ಯಾನವನ ಹಾಳು ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಮಿತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮುಖೇನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸಮಿತಿ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದಿಲ್ಲಿಯ ಜಂತರ್ ಮಂತರ್ ನಲ್ಲಿ ಭಾರತದ ಸಂವಿಧಾನ ಪ್ರತಿ ಸುಟ್ಟು ಹಾಕಿದ್ದು ಇಡೀ ದೇಶಕ್ಕೆ ಗೊತ್ತಿದೆ. ಅಂಬೇಡ್ಕರ್ ಕುಟುಂಬದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಆದರೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಂಬೇಡ್ಕರ್ ಕುಟುಂಬಕ್ಕೆ ಆದ ಅವಮಾನ ಇಡೀ ದೇಶಕ್ಕೆ ಆದ ಅವಮಾನ ಎಂದು ಪ್ರತಿಭಟನಾಕಾರರು ಹೇಳಿದರು.
ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನ ಮತ್ತು ಅವರ ಮನೆ ರಾಜಗೃಹ, ಅವರ ಮುದ್ರಣಾಲಯ, ಚೈತನ್ಯ ಭೂಮಿ, ದೀಕ್ಷಾ ಭೂಮಿಗೆ ಹಾಗೂ ಅಂಬೇಡ್ಕರ್ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಜಿಗಳಿ ಹಾಲೇಶ್, ನಿಟ್ಟುವಳ್ಳಿ ನಾಗರಾಜ್, ಪರಮೇಶ್ ಪುರದಾಳ್, ಬಾತಿ ಸಿದ್ದೇಶ್, ಚಂದ್ರಪ್ಪ, ಪ್ರದೀಪ್, ಹನುಮಂತಪ್ಪ, ಮಹಾಂತೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.