ಮಲ್ಲೇಬೆನ್ನೂರು ಅ.20 – ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷೀ ರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆ ಭರ್ತಿಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಯಾವುದೇ ಕ್ಷಣದಲ್ಲಿ ಕೆರೆ ಕೋಡಿ ಬೀಳುವ ಸಾಧ್ಯತೆ ಇದೆ ಎಂದು ಉಪ ತಹಶೀಲ್ದಾರ್ ಆರ್.ರವಿ ತಿಳಿಸಿದ್ದರು.
ಮಂಗಳವಾರ ಕೊಮಾರನಹಳ್ಳಿ ಕೆರೆ ಕೋಡಿ ಬೀಳಲು ಅರ್ಧ ಅಡಿ ಮಾತ್ರ ಬಾಕಿ ಇದೆ ಎಂದರು ಕಳೆದ 10 ವರ್ಷಗಳ ನಂತರ ಕೆರೆ ಭರ್ತಿಯಾಗಿ ಕೋಡಿ ಬೀಳುವ ದೃಶ್ಯವನ್ನು ಕಣ್ತುಂಬಿ ಕೊಳ್ಳಲು ಜನ ಉತ್ಸುಕರಾಗಿದ್ದಾರೆ. 97 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆ ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವು ದರಿಂದ ಎಲ್ಲರ ಗಮನ ಸೆಳೆಯುತ್ತಿದೆ.
ಸುತ್ತಲೂ ಗುಡ್ಡಗಳಿಂದ ಆವರಿಸಿ ಕೊಂಡಿರುವ ಈ ಕೆರೆಗೆ ಐತಿಹಾಸಿಕ ಹಿನ್ನೆಲೆ ಇದೆ. ಈ ಕೆರೆಯನ್ನು ಅಭಿವೃದ್ದಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರುಗಳಾದ ಹೆಚ್.ಎಸ್.ಶಿವಶಂಕರ್, ಬಿ.ಪಿ.ಹರೀಶ್, ಜಿ.ಪಂ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಎಪಿಎಂಸಿ ಸದಸ್ಯ ಜಿ.ಮಂಜುನಾಥ್ ಪಟೇಲ್ ಅವರು ನಿರಂತರ ಹೋರಾಟ ಮಾಡಿದ್ದನ್ನು ಮತ್ತು ಮಾಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.