ರೈತರಿಗೆ ಸಹಾಯ ಹಸ್ತ ನೀಡಲು ಸರ್ಕಾರ ಸಿದ್ಧ

ಹರಪನಹಳ್ಳಿ, ಅ.19- ರೈತರಿಗೆ ಸಹಾಯ ಹಸ್ತ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿದ್ದವಿದ್ದು ರೈತರು ಎದೆಗುಂದಬಾರದು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

ತಾಲ್ಲೂಕಿನ ಸಿಂಗ್ರಿಹಳ್ಳಿ, ತಾವ ರಗುಂದಿ, ಎನ್.ಬಸಾಪ್ಪುರ, ನಿಟ್ಟೂರು, ವಟ್ಲಹಳ್ಳಿ, ಹಲುವಾಗಲು ಹಾಗೂ ಇತರೆ ಗ್ರಾಮಗಳ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಹೊಲ ಗದ್ದೆಗಳಿಗೆ ನಿನ್ನೆ ಭೇಟಿ ನೀಡಿ ರೈತರ ಕಷ್ಟಗಳಿಗೆ ಅವರು ಸ್ಪಂದಿಸಿದರು.

ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಸಮೀಕ್ಷೆ ನಡೆಸಿರುವ ಅಧಿಕಾರಿಗಳು 82 ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತದ ಬೆಳೆ ನಷ್ಟವಾಗಿದೆ. ನುಗ್ಗೆ ಬೆಳೆ ಸಹ ಹಾನಿಗೊಳಗಾಗಿದೆ. 

ಒಟ್ಟು 94 ಮನೆಗಳು ಮಳೆಯಿಂದ ಹಾನಿಗೊಳಗಾಗಿವೆ. ತಾಲ್ಲೂಕು ಅತಿವೃಷ್ಟಿ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಿಸಿರುವ ಪರಿಣಾಮ ರೈತರಿಗೆ ಶೀಘ್ರ ಪರಿಹಾರ ದೊರಕಲಿದೆ. ನೀರಾವರಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‍ಗೆ ರೂ.13,500, ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟೇರ್‍ಗೆ ರೂ.18,000 ಹಾಗೂ ಮಳೆ ಆಶ್ರಿತ ಪ್ರದೇಶದ ಬೆಳೆಗಳಿಗೆ ರೂ. 6,800 ಎಂದು ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಸಂಪೂರ್ಣ ಮನೆ ನಾಶವಾಗಿದ್ದರೆ ರೂ. 5 ಲಕ್ಷ ಪರಿಹಾರ ದೊರಕಲಿದೆ. ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ರೈತರ ಬೆಳೆಗೆ ಶೀಘ್ರ ಪರಿಹಾರ ದೊರಕಿಸಲು ತ್ವರಿತ ಗತಿಯಲ್ಲಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಹಶೀಲ್ದಾರ್ ಅನಿಲ್ ಕುಮಾರ್, ಸಹಾಯಕ ಕೃಷಿ ಅಧಿಕಾರಿ ಮಂಜುನಾಥ ಗೊಂದಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಸಿಂಗ್ರಿಹಳ್ಳಿ ನಾಗರಾಜ, ಮುಖಂಡರಾದ ಎಂ.ಪಿ.ನಾಯ್ಕ್, ಕರೇಗೌಡರು, ಬಾಗಳಿ ಕೊಟ್ರೇಶಪ್ಪ, ಶಿರಗಾನಹಳ್ಳಿ ವಿಶ್ವನಾಥ್, ಯು.ಪಿ.ನಾಗರಾಜ್, ಸಂತೋಷ್ ಹಾಗೂ ಇತರರು ಹಾಜರಿದ್ದರು.

error: Content is protected !!