ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ಪರೀಕ್ಷೆ ಬೇಡ : ಎಐಡಿಎಸ್‌ಓ

ದಾವಣಗೆರೆ, ಜು.9- ವಿಶ್ವವಿದ್ಯಾನಿಲಯ ಗಳ ಪರೀಕ್ಷೆಗಳನ್ನು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಯುಜಿಸಿಗೆ ನೀಡಿರುವ ಮಾರ್ಗಸೂಚಿಗಳನ್ನು ಎಐಡಿಎಸ್‌ಓ ಟೀಕಿಸಿದೆ.

ಕೋವಿಡ್ ಅತ್ಯಂತ ವೇಗವಾಗಿ ಹರಡುತ್ತಿದೆ ಮತ್ತು ಕೆಲವು ರಾಜ್ಯಗಳಲ್ಲಿ ಸಾಮುದಾಯಿಕ ಹರಡುವಿಕೆ ಪ್ರಾರಂಭವಾಗಿದೆ. ಇಂತಹ ಸಂದರ್ಭದಲ್ಲಿ ಗೃಹ ಸಚಿವಾಲಯ ಯುಜಿಸಿಗೆ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ನಿರ್ದೇಶನ ನೀಡಿರುವುದು ಎಷ್ಟು ಸರಿ. ಈ ನಿರ್ಧಾರ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಕರ, ಪೋಷಕರ, ಸಿಬ್ಬಂದಿಗಳ ಜೀವನಕ್ಕೆ ಅಪಾಯವನ್ನುಂಟು ಮಾಡುತ್ತದೆ.  ಇತ್ತೀಚೆಗೆ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಿರ್ದೇಶನ ನೀಡಿತ್ತು. ಯುಜಿಸಿ ವಿದ್ಯಾರ್ಥಿಗಳ ಸಂಖ್ಯೆ ಇದಕ್ಕಿಂತ ಹೆಚ್ಚಿದ್ದು, ಪಠ್ಯಕ್ರಮ ಸಹ ಪೂರ್ಣವಾಗಿಲ್ಲ.

ಇದಲ್ಲದೆ ಯುಜಿಸಿ ಹೊರಡಿಸಿರುವ  ಸುತ್ತೋಲೆಯಲ್ಲಿ ಆನ್‌ಲೈನ್ ಪರೀಕ್ಷೆಯನ್ನು ಒಂದು ವಿಧಾನವೆಂದು ಪರಿಗಣಿಸುವುದಾಗಿ ಹೇಳಿದೆ. ಇದು ಅತ್ಯಂತ ಖಂಡನೀಯ ಎಂದಿದೆ. ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಪರೀಕ್ಷೆಗಳನ್ನು ನಡೆಸಬಾರದು. ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಸಮಸ್ಯೆಯನ್ನು ಶಿಕ್ಷಣ ತಜ್ಞರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ನಂತರವೇ ಅದನ್ನು ಪರಿಹರಿಸಬೇಕು. ವಿದ್ಯಾರ್ಥಿ ಪರವಾದ ಹೊಸ ಸುತ್ತೋಲೆಯನ್ನು ಹೊರಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತಂಕವನ್ನುಂಟು ಮಾಡುವ ಮಾರ್ಗಸೂಚಿಗಳನ್ನು ರದ್ದುಪಡಿಸ ಬೇಕು ಎಂದು ಎಐಡಿಎಸ್‌ಓ ಆಗ್ರಹಿಸುತ್ತದೆ ಎಂದು ಜಿಲ್ಲಾಧ್ಯಕ್ಷೆ ಸೌಮ್ಯ ಹಾಗೂ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ತಿಳಿಸಿದ್ದಾರೆ.

error: Content is protected !!