10 ವರ್ಷದ ಪಾಲಿಕೆ ಅನುದಾನ ಹಂಚಿಕೆ ಬಗ್ಗೆ ಶ್ವೇತ ಪತ್ರ ಹೊರಡಿಸಲಿ : ಜೆಡಿಎಸ್

ದಾವಣಗೆರೆ, ಜು. 11- ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಆಡಳಿತಾವಧಿಯಲ್ಲಿ ಮಹಾನಗರ ಪಾಲಿಕೆಯಲ್ಲಿ ವಾರ್ಡ್‌ವಾರು ಅನುದಾನ ಹಂಚಿಯಾಗಿರುವ ಬಗ್ಗೆ  ಸರ್ಕಾರಿ ದಾಖಲೆಗಳ ಮೂಲಕ ಶ್ವೇತ ಪತ್ರ ಹೊರಡಿಸಲಿ ಎಂದು ಕರ್ನಾಟಕ ಪ್ರದೇಶ ಜನತಾದಳ (ಜಾ)ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜೆ.ಅಮಾನುಲ್ಲಾ ಖಾನ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸದೆ, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಪರಸ್ಪರ ಕೆಸರೆರಚಾಟದಲ್ಲಿ ತೊಡಗುವ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸದಸ್ಯರು ತಮ್ಮ ಅವಧಿಯಲ್ಲಿ ಮಾಡಿದ ಕೆಲಸಗಳ ಬಗ್ಗೆ ಪ್ರಶ್ನಿಸಿಕೊಳ್ಳಬೇಕು. ಕಾಂಗ್ರೆಸ್ ಅವಧಿಯಲ್ಲಿಯೂ ನಗರದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಡಕ್ಕಿ ಭಟ್ಟಿ ಉನ್ನತೀಕರಣಕ್ಕೆ ಮೀಸಲಾದ 354 ಕೋಟಿ ರೂ. ಅನುದಾನವನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳಲಾಗಿದೆ. ಆದರೆ ಈಗ 30, 40 ಲಕ್ಷ ರೂ.ಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಪಾಲಿಕೆಯಿಂದ ಪಾರ್ಲಿಮೆಂಟ್ ವರೆಗೆ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೆ, ಅಶೋಕ ರಸ್ತೆ ಮೇಲ್ಸೇತುವೆ ಸಮಸ್ಯೆ ಹಾಗೆಯೇ ಉಳಿದಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸುವ ಬಸ್ ಸ್ಟ್ಯಾಂಡ್ ಕಾಮಗಾರಿಗೆ ತಡೆಯಾಜ್ಞೆ ತರಲಾಗಿದೆ. ಇವೆಲ್ಲದರ ಬಗ್ಗೆ ಗಮನ ಹರಿಸಿ ಸೂಕ್ತ ಯೋಜನೆ ರೂಪಿಸಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಖಾದರ್ ಭಾಷಾ, ಕೆ.ದಾದಾಪೀರ್, ಅಬ್ದುಲ್ ಘನಿ, ಸುಲೇಮಾನ್ ಉಪಸ್ಥಿತರಿದ್ದರು.

error: Content is protected !!