ಜಗಳೂರು ತಾಲ್ಲೂಕಿನ 57 ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಸದ, ಶಾಸಕರ ಪಾತ್ರ ಶೂನ್ಯ

ಜಗಳೂರು, ಜು.11- ತಾಲ್ಲೂಕಿನ 57 ಹಳ್ಳಿಗಳ ಕೆರೆ ನೀರು ತುಂಬಿಸುವ ಯೋಜನೆಯಲ್ಲಿ ಸಂಸದ, ಶಾಸಕರ ಪಾತ್ರ ಶೂನ್ಯವಾಗಿದ್ದು, ಕೇವಲ ಸ್ಥಳ ಪರಿಶೀಲಿಸಿ, ಫೋಟೋಕ್ಕೆ ಫೋಸ್ ಕೊಡುವುದು ಬಿಟ್ಟು, ತಮ್ಮ ಶ್ರಮ ಏನೆಂದು ಸಾಬೀತು ಪಡಿಸಲಿ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಸವಾಲ್ ಹಾಕಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರ ಅವಧಿಯಲ್ಲಿ ಸಿರಿಗೆರೆ ಶ್ರೀಗಳ ಪರಿಶ್ರಮದಿಂದ 57 ಕೆರೆಗಳನ್ನು ತುಂಬಿಸುವ ಯೋಜನೆಯ ಕಾಮಗಾರಿ ಆರಂಭವಾಗಿದೆ. ಇದರ ಮಾಹಿತಿ ತಿಳಿಯದೇ, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ನಾವು ತಂದಿದ್ದು ಎಂದು ಸುಳ್ಳು ಹೇಳಿ ಬಣ್ಣದ ಮಾತುಗಳನ್ನಾಡಿ, ಶಾಸಕ ಸಂಸದರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಮುಗ್ಧ ಜನರಿರಬಹುದು. ಆದರೆ, ಪ್ರಜ್ಞಾವಂತರಿದ್ದಾರೆ. ಮುಂದಿನ ದಿನದಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಲೇವಡಿ ಮಾಡಿದರು. 

ಕ್ಷೇತ್ರದಲ್ಲಿ ವಿರೋಧ ಪಕ್ಷದ ಸಲಹೆಯನ್ನು ಸ್ವೀಕರಿಸಿದೇ ಸರ್ವಾಧಿಕಾರಿಯಂತೆ ಶಾಸಕ ಎಸ್.ವಿ.ರಾಮಚಂದ್ರ ಅವರು ವರ್ತಿಸುತ್ತಿರುವುದಲ್ಲದೇ, ಸಾರ್ವಜನಿಕರು, ದಾನಿಗಳು ನೀಡಿದ ಹಣ ದುರುಪಯೋಗ ಮಾಡಿಕೊಂಡು ಪಕ್ಷದ ವೇದಿಕೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸನ್ಮಾನಿಸಿದ್ದು, ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದರು.

ದಾವಣಗೆರೆಯಲ್ಲಿ ಐಷಾರಾಮಿ ಜೀವನ ನಡೆಸುವ ನಿಮ್ಮಗೆ ಕ್ಷೇತ್ರದ ಅಭಿವೃದ್ಧಿಯ ಚಿಂತೆಯಿಲ್ಲ ಎಂದು ಶಾಸಕರಿಗೆ ಕುಟುಕಿದರು. ಜಗಳೂರು ತಾಲ್ಲೂಕು ಬರ ಪೀಡಿತ ಪಟ್ಟಿಯಲ್ಲಿ ಘೋಷಣೆಯಾಗಿ ಒಂದು ವರ್ಷ ಕಳೆದರೂ ಸಹ ಯಾವುದೇ ವಿಶೇಷ ಅನುದಾನ ಕ್ಷೇತ್ರಕ್ಕೆ ತಂದಿಲ್ಲ.

– ಹೆಚ್.ಪಿ. ರಾಜೇಶ್, ಮಾಜಿ ಶಾಸಕರು

ತಾಲ್ಲೂಕಿನಲ್ಲಿ ಈಗಾಗಲೇ 11 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದರೂ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿ ಸಿಲ್ಲ. ಅಲ್ಲದೇ ಕನಿಷ್ಟ ಒಂದು ಸಭೆಯನ್ನು ನಡೆಸಲಿಲ್ಲ. ಕೊರೊನಾ ವಾರಿರ್ಯಸ್‌ಗೆ ಸರಿಯಾದ ಮಾಸ್ಕ್, ಸ್ಯಾನಿಟೈಸರ್ ಹಾಗೂ ಅಗತ್ಯ ಸಂರಕ್ಷಣೆ ಇಲ್ಲದೇ ಕೆಲಸ ಮಾಡುವಂತಾಗಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ತಾಲ್ಲೂಕಿನಲ್ಲಿ ಕೊರೊನಾ ವೈರಸ್ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಸ್ಥಳೀಯವಾಗಿ ಕ್ಷೇತ್ರದಲ್ಲಿ ನಡೆಯವ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಜನಪ್ರತಿನಿಧಿಗಳನ್ನು ಆಹ್ವಾನ ಮಾಡದೆ, ಪಕ್ಷದ ಬ್ಯಾನರ್‌ ಕಟ್ಟಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ತಾವುಗಳೇ ಅಧಿಕಾರಿಗಳನ್ನು ಬಳಸಿಕೊಂಡು ಅಮಾಯಕ ಪಿಡಿಒಗಳನ್ನು ಅಮಾನತ್ತು ಮಾಡಿಸಿರುವುದು ನಿಮ್ಮ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತರೂ ಸರಿಪಡಿಸಿಲ್ಲ. ಕ್ಷೇತ್ರದಾದ್ಯಂತ ಕಳಪೆ ಕಾಮಗಾರಿ ಮಾಡಿ, ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕರು ಆರೋಪಿಸಿದರು.

ಪಟ್ಟಣ ಪಂಚಾಯಿತಿಯಲ್ಲಿ ಅಭಿವೃದ್ಧಿ ಹೆಸರಲ್ಲಿ ಸರ್ಕಾರದ ಹಣ ಕೊಳ್ಳೆ ಹೊಡೆ ಯಲಾಗಿದ್ದು, ರಸ್ತೆ ಅಗಲೀಕರಣ ಮಾಡದೇ ಫುಟ್‌ಪಾತ್ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿ ಮಾಡಿ, ತಾಂತ್ರಿಕ ಕಾರಣದಿಂದ ರಸ್ತೆ ಅರ್ಧಕ್ಕೆ ನಿಂತಿದೆ. ಇಂತಹ ವಿವೇಚನೆ ಇಲ್ಲದೇ ಶಾಸಕರು ಕೆಲಸ ಮಾಡುತ್ತಿದ್ದಾರೆ. 

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ಕೆಪಿಸಿಸಿ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಪಾಲಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಅಜಾಮುಲ್ಲಾ, ಮುಖಂಡರಾದ ಎ.ವೆಂಕಟೇಶ್, ತಿಪ್ಪೇಸ್ವಾಮಿ, ಬಿ.ಲೋಕೇಶ್, ಪಲ್ಲಾಗಟ್ಟೆ ಶೇಖರಪ್ಪ, ಗೋಡೆ ಪ್ರಕಾಶ್, ಪ.ಪಂ ಸದಸ್ಯ ರವಿಕುಮಾರ್, ಶಕೀಲ್ ಅಹಮದ್, ಮಹಮದ್ ಸೇರಿದಂತೆ ಇತರರಿದ್ದರು.

error: Content is protected !!