ಲಾಕ್‌ಗೆ ಜಿಲ್ಲಾವಾರು ಅಧಿಕಾರ : ಜನಪ್ರತಿನಿಧಿಗಳ ಜೊತೆ ಚರ್ಚಿಸಿ ನಿರ್ಧಾರ: ಡಿಸಿ

ಲಾಕ್‌ಗೆ ಜಿಲ್ಲಾವಾರು ಅಧಿಕಾರ : ಜನಪ್ರತಿನಿಧಿಗಳ ಜೊತೆ ಚರ್ಚಿಸಿ ನಿರ್ಧಾರ: ಡಿಸಿ - Janathavaniದಾವಣಗೆರೆ, ಜು. 13 – ಜಿಲ್ಲೆಯಲ್ಲಿ ಕೊರೊನಾ ಹರಡುವುದನ್ನು ತಡೆಯಲು ಲಾಕ್‌ಡೌನ್ ಹೇರುವ ಬಗ್ಗೆ ಜನಪ್ರತಿನಿಧಿಗಳ ಜೊತೆ ಚರ್ಚಿಸಿದ ನಂತರ ನಿರ್ಧರಿಸು ವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಲಾಕ್‌ಡೌನ್ ಜಾರಿ ಮಾಡುವ ಬಗ್ಗೆ ಸೋಮವಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ವೈಯಕ್ತಿಕವಾಗಿ ಚರ್ಚಿಸಿದ ನಂತರ ಲಾಕ್‌ಡೌನ್ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲಾಡಳಿತದ ಮೂಲಕ ಎಷ್ಟೇ ಕ್ರಮ ತೆಗೆದುಕೊಂಡರೂ ಊರು ಬದಲಾಗುವುದಿಲ್ಲ. ಜನರಲ್ಲಿನ ಮನೋಭಾವ ಬದಲಾಗಬೇಕು. ಅನವಶ್ಯಕವಾಗಿ ಹೊರಗೆ ಬರಬಾರದು, ಹೊರ ಬರುವಾಗ ಮಾಸ್ಕ್ ಹಾಕಿಕೊಳ್ಳ ಬೇಕು. ಜನರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಎಂದವರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈಗ ನಗರ ಭಾಗಗಳಲ್ಲಿ 60 ಹಾಗೂ ಗ್ರಾಮೀಣ ಭಾಗಳಲ್ಲಿ 21 ಸೇರಿದಂತೆ ಒಟ್ಟು 81 ಸಕ್ರಿಯ ಕಂಟೈನ್‌ಮೆಂಟ್ ವಲಯಗಳಿವೆ. ಇಲ್ಲಿ ಸಂಚಾರ ನಿಯಂತ್ರಣದ ಜೊತೆಗೆ, ಸುತ್ತಲಿನ ಬಫರ್ ವಲಯದಲ್ಲೂ ನಿಗಾ ವಹಿಸಲಾಗುವುದು. ಯಾವುದೇ ಕೊರೊನಾ ಪ್ರಕರಣ ತಪ್ಪಿ ಹೋಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಶೇ.48ರಷ್ಟು ಬಿತ್ತನೆ : ಮುಂಗಾರು ಹಂಗಾಮಿನಲ್ಲಿ ರೈತರಿಗೆ ನೆರವಾಗುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚನೆ ನೀಡಿದ್ದು, ಅದರಂತೆ ಬೀಜ ಹಾಗೂ ಗೊಬ್ಬರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೀಳಗಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇಲ್ಲಿಯವರೆಗೂ ಜಿಲ್ಲೆಯಲ್ಲಿ  ಶೇ.48ರಷ್ಟು ಬಿತ್ತನೆಯಾಗಿದೆ. ಬೀಜ ಹಾಗೂ ಗೊಬ್ಬರಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದವರು ಹೇಳಿದ್ದಾರೆ.

error: Content is protected !!