ಹರಪನಹಳ್ಳಿ, ಅ.17- ಖಾಸಗಿ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಖಂಡಿಸಿ, ಏಕಲವ್ಯ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಏಕಲವ್ಯ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ರಾಯದುರ್ಗದ ಪ್ರಕಾಶ್ ಮಾತನಾಡಿ, ಖಾಸಗಿ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಬಡ ವಿದ್ಯಾರ್ಥಿಗಳಿಂದ ಡೊನೇಷನ್ ರೂಪದಲ್ಲಿ ಹಣ ವಸೂಲಿ ಮಾಡುತ್ತಿರುವುದು ಶೈಕ್ಷಣಿಕ ಶೋಷಣೆಯಾಗಿದೆ. ಶಿಕ್ಷಣವನ್ನು ವ್ಯಾಪಾರದ ವಸ್ತುವಂತೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾರಕವಾಗುತ್ತದೆ. ಈ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ತಳವಾರ ಶಿವರಾಜ್ ಮಾತನಾಡಿ, ಕೊರೊನಾ ಸೋಂಕಿನ ಸಂಕಷ್ಟದಿಂದ ಈಗಾಗಲೇ ಜನಸಾಮಾನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಸರ್ಕಾರಿ ಹಾಗೂ ಇತರೆ ವಲಯಗಳ ಜವಾಬ್ದಾರಿ ಆಗಿರಬೇಕಿತ್ತು. ಆದರೆ ಖಾಸಗಿ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದು, ನಮ್ಮ ಸಂಘಟನೆಯವರು ಈಗಾಗಲೇ ಎಲ್ಲಾ ಪದವಿ ಕಾಲೇಜುಗಳಿಗೆ ತೆರಳಿ, ಸರ್ಕಾರ ನಿಗದಿ ಪಡಿಸಿದ ಶುಲ್ಕ ತೆಗೆದುಕೊಳ್ಳಿ ಎಂದರೂ ಕೂಡ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವುದು ಖಂಡನೀಯ. ಈ ಕೂಡಲೇ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ವಿದ್ಯಾರ್ಥಿ ಸಂಘಟನೆ ಸಮ್ಮುಖದಲ್ಲಿ ಸಭೆ ನಡೆಸಬೇಕು ಎಂದರು.
ಉಪಾಧ್ಯಕ್ಷರುಗಳಾದ ಮೈದೂರಿನ ಪರಶು ರಾಮ್, ಅಲಮರಸೀಕೆರೆಯ ಟಿ.ಮಂಜುನಾಥ್, ಖಜಾಂಚಿ ಜಿ.ದಾದಾಪುರದ ಹರೀಶ್, ಹರಪನ ಹಳ್ಳಿಯ ಗಿಡ್ಡಳ್ಳಿ ವಿಜಯಕುಮಾರ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.