ದಾವಣಗೆರೆ, ಜು.13- ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ಗೌರವ ಧನ ಖಾತರಿಪಡಿಸ ಬೇಕೆಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇದೇ ದಿನಾಂಕ 10ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರು ಕೈಗೊಂಡಿರುವ ಹೋರಾಟ ಮುಂದುವರೆದಿದೆ.
ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಇಂದು ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿ ನಂತರ ಮೇಯರ್ ಅಜಯ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕೋವಿಡ್-19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷಣಾ ಸಾಮಗ್ರಿಗಳನ್ನು ನೀಡಬೇಕು, ಸೋಂಕಿಗೆ ಒಳಗಾದ ಆಶಾಗೆ ಪರಿಹಾರ ಮತ್ತು ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕೆಂಬ ಕೊರೊನಾ ವಾರಿಯರ್ಸ್‍ಗಳಾದ ನಮ್ಮ ನ್ಯಾಯಯುತ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳು ಸ್ಪಂದಿಸಬೇಕು. ಈ ಮೂಲಕ ನಿಜವಾಗಿಯೂ ಜನಪರ ಆರೋಗ್ಯದ ಕಾಳಜಿಯನ್ನು ತೋರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಾಗರತ್ನ, ನೇತ್ರಾವತಿ, ರುಕ್ಕಮ್ಮ, ಮಂಜುಳಾ, ಪರ್ವಿನ್ ಬಾನು, ಜ್ಯೋತಿ, ರಾಜೇಶ್ವರಿ, ಭಾಗ್ಯ, ತಿಪ್ಪೇಸ್ವಾಮಿ ಅಣಬೇರು ಸೇರಿದಂತೆ ಇತರರು ಇದ್ದರು.