ದಾವಣಗೆರೆ, ಜು. 13- ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ನೆರವಿಗೆ ಸರ್ಕಾರ ಕೂಡಲೇ ನೆರವಾಗಬೇಕು ಎಂದು ಜಿಲ್ಲಾ ಪ್ರದೇಶ ಕಾಂಗ್ರೆಸ್ ಕಮಿಟಿ ಹಾಗೂ ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪ್ರದೇಶ ಕಾಂಗ್ರೆಸ್ ಕಮಿಟಿಯ ಶಿಕ್ಷಕರ ಹಾಗೂ ಪದವೀಧರರ ವಿಭಾಗದ ಅಧ್ಯಕ್ಷ ಎಸ್.ಎಸ್. ಗಿರೀಶ್, ಕಳೆದ ನಾಲ್ಕೈದು ತಿಂಗಳಿನಿಂದ ವೇತನ ಇಲ್ಲದೆ ಶಿಕ್ಷಕರು, ಉಪನ್ಯಾಸಕರು ಬೀದಿಗೆ ಬಂದಿದ್ದಾರೆ. ಕೆಲವರು ತರಕಾರಿ ಮಾರಾಟ, ಸೆಕ್ಯೂರಿಟಿ ಕೆಲಸ, ಬಾರ್ ಗಳಲ್ಲಿ, ಮತ್ತಿತರೆ ಕಡೆ ಕೂಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ಅವರಿಗೆ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಪದವಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹೆಚ್.ಕೊಟ್ರೇಶ್, ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರು ಹಾಗೂ ಖಾಸಗಿ ಶಾಲಾ ಶಿಕ್ಷಕರಿಗೆ ಭದ್ರತೆ ಇಲ್ಲವಾಗಿದೆ. ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಉಂಡು ಬಿಸಾಡುವ ಬಾಳೆ ಎಲೆಯಂತೆ ಅವರನ್ನು ಬಳಸಿಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಕುಟುಂಬ ನಿರ್ವಹಿಸಲಾಗದೆ ಈಗಾಗಲೇ 8 ಜನ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಹೆಚ್ಚಾಗುವ ಸಂಭವವೂ ಇದೆ. ಉಪನ್ಯಾಸಕರ ಸಾವಿಗೆ ಸರ್ಕಾರವೇ ನೇರ ಹೊಣೆ.
– ಹೆಚ್.ಕೊಟ್ರೇಶ್
ಬೇರೆ ಜಿಲ್ಲೆಗಳಲ್ಲಿ ಉಪನ್ಯಾಸಕರಿಗೆ ಭದ್ರತೆ, ವೇತನ ಇದೆ. ಅತಿಥಿ ಉಪನ್ಯಾಸಕರಿಗೆ ಗಂಟೆಗೆ 1500 ರೂ. ನೀಡಲು ಯುಜಿಸಿ ಸುತ್ತೋಲೆ ಹೊರಡಿಸಿದ್ದರೂ ಸರ್ಕಾರ ಆ ನಿಯಮವನ್ನು ಜಾರಿಗೆ ತಂದಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸುಪ್ರೀಂ ಕೋರ್ಟ್ ಆದೇಶವೂ ಲೆಕ್ಕಕ್ಕೆ ಇಲ್ಲವಾಗಿದೆ ಎಂದರು.
ಉಪನ್ಯಾಸಕರನ್ನು ಆಧುನಿಕ ಜೀತ ಪದ್ಧತಿಯಿಂದ ಮುಕ್ತ ಗೊಳಿಸಬೇಕು. ಲಾಕ್‌ಡೌನ್ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ವೇತನ ನೀಡಬೇಕು. ನಿಯಮಾನುಸಾರ ವೈದ್ಯಕೀಯ ಸೌಲಭ್ಯ, ಭವಿಷ್ಯ ನಿಧಿ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ಮುಜಾಹಿದ್, ತಿಪ್ಪೇಸ್ವಾಮಿ, ಅರುಣ್ ಕುಮಾರ್, ಸಂತೋಷ್, ಹಾಲೇಶ್, ಶ್ರೀನಿವಾಸ್, ನವೀನ್ ಕುಮಾರ್ ಇತರರು ಉಪಸ್ಥಿತರಿದ್ದರು.