ಬದುಕು ಪಣಕ್ಕಿಟ್ಟು ಹೋರಾಡಿದ ನಿಮಗೆ ಆಭಾರಿ

ದಾವಣಗೆರೆ, ಜು.11- ಬದುಕನ್ನು ಸವಾಲಾಗಿ ಸ್ವೀಕರಿಸಿ, ಕುಟುಂಬ ಮರೆತು ವೈಯಕ್ತಿಕ ಬದುಕು ಪಣಕ್ಕಿಟ್ಟು, ಜೀವ ಲೆಕ್ಕಿಸದೇ ಕೊರೊನಾ ಸಂದರ್ಭದಲ್ಲಿ ಹೋರಾಡಿದ ಎಲ್ಲರಿಗೂ ಆಭಾರಿಯಾಗಿದ್ದೇವೆ. ಆ ಮೂಲಕ ನಿಮ್ಮನ್ನು ಇನ್ನಷ್ಟು ಹುರಿದುಂಬಿಸಲು ಜೊತೆಗೆ ಎಲ್ಲರ ಸೇವೆ ಸ್ಮರಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ ಮತ್ತು ಚಿಗಟೇರಿ ಜಿಲ್ಲಾ ಆಸ್ಪತ್ರೆ ಇವರ ವತಿಯಿಂದ ಶನಿ ವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್-19 ರೋಗಿಗಳ ಆರೈಕೆಯಲ್ಲಿ ಭಾಗವಹಿಸಿದ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ವೈದ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

ನಿಮ್ಮಗಳ ಸೇವೆ ಸ್ಮರಿಸಲು ಶಬ್ದಗಳೇ ಇಲ್ಲ. ನಿಮ್ಮನ್ನು ಬಣ್ಣಿಸಲು ಆಗದ ರೀತಿಯಲ್ಲಿ ವೈದ್ಯಕೀಯ ರಂಗದ ಎಲ್ಲ ಸದಸ್ಯರು ಸೇವೆ ಸಲ್ಲಿಸಿದ್ದೀರಿ. ಕೊರೊನಾ ಸಂದರ್ಭದಲ್ಲಿ ಬಹಳಷ್ಟು ವ್ಯವಸ್ಥಿತವಾಗಿ ಕೆಲಸ ಮಾಡಿಕೊಂಡು ಬರಲಾಗಿದೆ. ಮೊದ ಮೊದಲು ಜಿಲ್ಲೆಯಲ್ಲಿ ಕೊರೊನಾ ಕೇಸ್‍ಗಳ ಸಂಖ್ಯೆ ಹೆಚ್ಚಳವಾದ ಸಂದರ್ಭದಲ್ಲಿ ಎಲ್ಲರಲ್ಲೂ ಮಂಕು ಕವಿದ ವಾತಾವರಣ ಉಂಟಾಗಿತ್ತು. ದಿನ ನಿತ್ಯದ ಕಾರ್ಯದಲ್ಲಿ ತೊಡಗಿದಾಗ ನನ್ನ ಮುಖದಲ್ಲಿ ಕಾಂತಿ ಇಲ್ಲದ್ದನ್ನು ಗಮನಿಸಿದ ಜಿಲ್ಲಾಡಳಿತದ ನಮ್ಮ ತಂಡ 20 ಅಲ್ಲ 200 ಕೇಸ್ ಬರಲಿ ಸರ್ ನಾವು ನಿಭಾಯಿಸುತ್ತೇವೆ. ಆದರೆ ನೀವು ಮೊದಲಿನ ರೀತಿಯಲ್ಲಿಯೇ ನಮ್ಮೆಲ್ಲರನ್ನು ಹುರಿದುಂಬಿಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು ಎಂಬುದನ್ನು ನೆನಪಿಸಿಕೊಂಡರು.

ಜಿಲ್ಲೆ ರಾಜ್ಯದ ಹೃದಯಭಾಗದಲ್ಲಿದೆ. ಇಲ್ಲಿಗೆ ಅನೇಕ ರೆಫರ್ ಪೇಷಂಟ್‍ಗಳು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ವಿಶಿಷ್ಟವಾಗಿದೆ. ಇದುವರೆಗೂ 13 ಸಾವಿರ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಲ್ಯಾಬ್‍ಗೆ ಕಳುಹಿಸಲಾಗಿದೆ. ಹಂತ ಹಂತವಾಗಿ ಇದೀಗ ಪರೀಕ್ಷೆಗೆ ಕಳುಹಿಸಿದ ಫಲಿತಾಂಶ ಬರುತ್ತಿದ್ದು, ಪಾಸಿಟಿವ್ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಯಾರೊಬ್ಬರು ಕೊರೊನಾ ಕುರಿತು ಆತಂಕ ಪಡಬೇಕಿಲ್ಲ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗರಾಜ್ ಮಾತನಾಡಿ, ಕೊರೊನಾ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಈಗಾಗಲೇ ದೇಶದ ತುಂಬಾ ವ್ಯಾಪಿಸಿ 7 ತಿಂಗಳು ಕಳೆದಿದೆ. ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಪ್ರೋತ್ಸಾಹಿಸಿ ಮಾನಸಿಕವಾಗಿ ಸಿದ್ಧರಾಗಲು ಜೊತೆಗೆ ಹೆಚ್ಚಿನ ಕೆಲಸ ಮಾಡಲು ಪ್ರಶಂಸಿಸಲು ಈ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಹಾಗೂ ಅರೆ ಸರ್ಕಾರಿ ವೈದ್ಯರು ಸೇರಿಕೊಂಡು ಜೊತೆಗೆ ಎಲ್ಲ ವಿಭಾಗದವರು ಭಾಗಿಯಾಗಿ ಸುಮಾರು 850 ಜನರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬರಲಾಗಿದ್ದು, ಈಗಾಗಲೇ 344 ಕೊರೊನಾ ರೋಗಿಗಳನ್ನು ಗುಣಮುಖರಾನ್ನಾಗಿಸಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವೈದ್ಯರು ಮತ್ತು ಅರೆಕಾಲಿಕ ವೈದ್ಯಕೀಯ ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಸಿಇಒ ಪದ್ಮಾ ಬಸವಂತಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಾ.ರವಿ, ಡಾ.ಸುರೇಂದ್ರ, ಡಾ.ಕಾಳಪ್ಪ, ಡಾ.ಸುಭಾಶ್‍ಚಂದ್ರ, ಎಸ್‍ಎಸ್‍ಐಎಂಎಸ್ ಪ್ರಾಂಶುಪಾಲ ಡಾ.ಪ್ರಸಾದ್ ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಮೆಡಿಕಲ್ ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.

error: Content is protected !!