ದಾವಣಗೆರೆ, ಜು.12- ಕೋವಿಡ್-19 ಕೊರೊನಾ ವ್ಯಾಪಕ ವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಸದರ ಪ್ರಯತ್ನದಿಂದಾಗಿ ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ 110 ವೈದ್ಯಕೀಯ ವಿದ್ಯಾರ್ಥಿಗಳು ನಾಳೆ ದಿನಾಂಕ 12ರ ಸೋಮವಾರ ವಿಶೇಷ ವಿಮಾನದ ಮೂಲಕ ತಾಯ್ನಾಡಿಗೆ ಮರಳಲಿದ್ದಾರೆ.
ತಾಯ್ನಾಡಿಗೆ ಬರಲು ಅವಕಾಶ ಕೋರಿ ಫೇಸ್ಬುಕ್ ಹಾಗೂ ಟ್ವಿಟ್ಟರ್ ಮೂಲಕ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಸಂಸದರು ವಿದೇಶಾಂಗ ಸಚಿವರಾದ ಜೈಶಂಕರ್, ವಿಮಾನಯಾನ ಸಚಿವ ಹರಿದ್ವೀಪ್ ಸಿಂಗ್ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು.
ಮನವಿಗೆ ಸ್ಪಂದಿಸಿದ ಸಚಿವದ್ವಯರು ಜು.13 ರಂದು ಮಾಸ್ಕೋದಿಂದ ಬೆಂಗಳೂರಿಗೆ ಬರಲು ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದಾರೆ. ಈ 110 ವೈದ್ಯಕೀಯ ವಿದ್ಯಾರ್ಥಿಗಳ ಸಮೂಹದಲ್ಲಿ 11 ಜನರು ದಾವಣಗೆರೆ ಜಿಲ್ಲೆಯವರಿದ್ದಾರೆ ಎಂಬುದು ಗಮನಾರ್ಹ.