ರಾಣೇಬೆನ್ನೂರಿನಲ್ಲಿ ಕೊರೊನಾ ಶಂಕಿತ ಮಹಿಳೆಯ ಶವಸಂಸ್ಕಾರಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.
ದಾವಣಗೆರೆ, ಜು. 12 – ಜಿಲ್ಲೆಯಲ್ಲಿ ಭಾನುವಾರ 66 ಜನರು ಕೊರೊನಾದಿಂದ ಗುಣ ಮುಖರಾಗಿ ಬಿಡುಗಡೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಇಷ್ಟು ಪ್ರಮಾಣದ ಜನರು ಒಂದೇ ದಿನ ಗುಣಮುಖರಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 104ಕ್ಕೆ ಗಣನೀಯವಾಗಿ ಇಳಿಕೆಯಾಗಿದೆ.
ಇದೇ ದಿನದಂದು ಜಿಲ್ಲೆಯಲ್ಲಿ 20 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಭಾನುವಾರ ಜಿಲ್ಲೆಯಲ್ಲಿ ಮೂವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಕೊರೊ ನಾದಿಂದ ಮೃತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ 534 ಸೋಂಕಿತರು ಕಂಡು ಬಂದಿದ್ದಾರೆ. ಇವರ ಪೈಕಿ 410 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೊರೊನಾ ಶಂಕೆ : ಮಹಿಳೆಯ ಶವ ಸಂಸ್ಕಾರಕ್ಕೆ ಸಾರ್ವಜನಿಕರ ವಿರೋಧ
ರಾಣೇಬೆನ್ನೂರು, ಜು.12- ಅನಾರೋಗ್ಯದಿಂದ ನಿಧನ ಹೊಂದಿದ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆ ಸಾರ್ವಜನಿಕರು ಅಡ್ಡಿ ಪಡಿಸಿದ ಘಟನೆ ಭಾನುವಾರ ನಗರದ ಕೂನಬೇವು ಪ್ಲಾಟ್ ಸ್ಮಶಾನದ ಬಳಿ ನಡೆಯಿತು.
ಮಾರುತಿ ನಗರದ ವ್ಯಕ್ತಿಯೊಬ್ಬರು ಇತ್ತೀಚಿಗೆ ಕೊರೊನಾದಿಂದಾಗಿ ದಾವಣಗೆರೆಯಲ್ಲಿ ಮೃತಪಟ್ಟಿದ್ದರು. ಅವರ ಪತ್ನಿಯು ಬೇರೆ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದರು. ಇಂದು ಅವರ ಶವ ಸಂಸ್ಕಾರ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಹಿಳೆಯ ಸಾವಿಗೂ ಮುನ್ನ ಸ್ವ್ಯಾಬ್ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಆದರೂ ಕೂಡ ಸ್ಮಶಾನ ಪ್ರದೇಶದ ಸುತ್ತಮುತ್ತಲಿನ ಜನರು ಯಾವುದೇ ಕಾರಣಕ್ಕೂ ಶವಸಂಸ್ಕಾರ ಮಾಡಕೂಡದು. ಅವರ ಪತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದ್ದರಿಂದ ಅವರ ಪತ್ನಿ ಶವವನ್ನು ಇಲ್ಲಿ ಅಂತ್ಯ ಸಂಸ್ಕಾರ ಮಾಡಬಾರದೆಂದು ಆಗ್ರಹಿಸಿ, ದಿಢೀರ್ ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದ ತಕ್ಷಣ ತಹಶೀಲ್ದಾರ್ ಬಸನಗೌಡ ಕೊಟ್ಟೂರು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆದು ಶವ ಸಂಸ್ಕಾರ ನಡೆಸಲು ಅನುಮತಿ ನೀಡಲಾಯಿತು.
ಡಿವೈಎಸ್ಪಿ ಟಿ.ವಿ.ಸುರೇಶ್, ಗ್ರಾಮೀಣ ಸಿಪಿಐ ಸುರೇಶ್ ಸಗರಿ, ಪಿಎಸ್ಐಗಳಾದ ಮೇಘರಾಜ್, ಪ್ರಭು ಕೆಳಗಿನಮನಿ, ನಗರಸಭಾ ಸದಸ್ಯರಾದ ಪ್ರಕಾಶ ಪೂಜಾರ್, ಪಾಂಡುರಂಗ ಗಂಗಾವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಯಲವಟ್ಟಿಯ ವೃದ್ಧರೊಬ್ಬರಿಗೆ ಕೊರೊನಾ ಪಾಸಿಟಿವ್ : ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಮಲೇಬೆನ್ನೂರು, ಜು.12- ಯಲವಟ್ಟಿ ಗ್ರಾಮದ 66 ವರ್ಷದ ವೃದ್ಧರೊಬ್ಬರು ಅನಾರೋಗ್ಯದ ಕಾರಣ ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಗೆ ದಾಖಲಾದ 10 ದಿನಗಳ ನಂತರ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಅನ್ನನಾಳದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಕೊರೊನಾ ಟೆಸ್ಟ್ ಕೂಡಾ ಮಾಡಲಾಗಿತ್ತು ಎನ್ನಲಾಗಿದೆ. ನಿನ್ನೆ ಅವರ ಗಂಟಲು ದ್ರವ ಪರೀಕ್ಷಾ ವರದಿ ಪಾಸಿಟಿವ್ ಬಂದ ಕಾರಣ, ಉಡುಪಿಯ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ವೃದ್ಧ ವ್ಯಕ್ತಿಯ ವರದಿ ಪಾಸಿಟಿವ್ ಬಂದಿರುವುದರಿಂದ ಯಲವಟ್ಟಿಯಲ್ಲಿರುವ ಅವರ ಕುಟುಂಬದವರನ್ನು ಹೋಂ ಕ್ವಾರಂಟೈನ್ ಮಾಡಿ, 3 ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ಹೊಳೆಸಿರಿಗೆರೆಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೇಖಾ, ಗ್ರಾ.ಪಂ. ಪಿಡಿಒ ರಾಮನಗೌಡ, ಹಿರಿಯ ಆರೋಗ್ಯ ಸಹಾಯಕ ಹೊರಕೇರಿ, ಕಿರಿಯ ಆರೋಗ್ಯ ಸಹಾಯಕಿಯರಾದ ಭಾಗ್ಯಮ್ಮ, ಆರೋಗ್ಯವಾಣಿ, ಆಶಾ ಕಾರ್ಯಕರ್ತೆಯರು, ಕ್ವಾರಂಟೈನ್ ಕುಟುಂಬದವರಿಗೆ ಧೈರ್ಯ ಹೇಳಿ, ಜಾಗೃತಿ ವಹಿಸುವಂತೆ ತಿಳಿಸಿ, ಏರಿಯಾವನ್ನು ಸ್ಯಾನಿಟೈಸ್ ಮಾಡಿಸಿದರು.
ಹರಿಹರ: 10 ಪಾಸಿಟಿವ್ : ನಾಯಕರು, ಅಧಿಕಾರಿಗಳ ದ್ವಂದ್ವ ಹೇಳಿಕೆಗಳಿಗೆ ಜನ ಕಂಗಾಲು
ಹರಿಹರ, ಜು.12- ನಗರದಲ್ಲಿ ಒಂಬತ್ತು ಮತ್ತು ಗ್ರಾಮೀಣ ಪ್ರದೇಶದ ಕೊಂಡಜ್ಜಿ ಗ್ರಾಮದಲ್ಲಿ ಒಂದು ಸೇರಿದಂತೆ ಹರಿಹರ ತಾಲ್ಲೂಕಿನಲ್ಲಿ ಒಟ್ಟು ಹತ್ತು ಕೊರೊನಾ ಸೋಂಕು ಪ್ರಕರಣಗಳು ದೃಢ ಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಎಂ.ವಿ. ಹೊರಿಕೇರಿ ತಿಳಿಸಿದರು.
ನಗರದ ಆಂಜನೇಯ ಬಡಾವಣೆ, ಟಿಪ್ಪುನಗರ, ಕುಂಬಾರ ಓಣಿ, ಇಂದ್ರಾ ನಗರ ಐದನೇ ಕ್ರಾಸ್, ಹಳ್ಳದಕೇರಿ, ಸಾರ್ವಜನಿಕ ಆಸ್ಪತ್ರೆಯ ಮುಂಭಾಗ, ಎ.ಪಿ.ಎಂ.ಸಿ. ಪಾಟೀಲ್ ಸಾಮಿಲ್, ಗಿರಿಜ್ ಮೆಡಿಕಲ್ ಪಕ್ಕ ಸೇರಿದಂತೆ ಗ್ರಾಮೀಣ ಪ್ರದೇಶವಾದ ಕೊಂಡಜ್ಜಿ ಗ್ರಾಮದಲ್ಲಿ ಒಂದು ಸೇರಿದಂತೆ ಹರಿಹರ ತಾಲ್ಲೂಕಿನಲ್ಲಿ ಒಟ್ಟು ಹತ್ತು ಕೊರೊನಾ ಸೋಂಕು ಪ್ರಕರಣಗಳು ಕಂಡುಬಂದಿವೆ ಎಂದು ತಿಳಿಸಿದರು. ಡಾ. ವಿಶ್ವನಾಥ್ ಮಾತನಾಡಿ, ನಗರದ ಗುತ್ತೂರು ಗ್ರಾಮದ ಹಾಸ್ಟೆಲ್ ಕ್ವಾರಂಟೈನ್ ನಲ್ಲಿ ಇದ್ದ 39 ಜನರಲ್ಲಿ ಇಂದು ಒಂದು ಮಗು ಮತ್ತು ಗರ್ಭಿಣಿ ಮಹಿಳೆ ಸೇರಿದಂತೆ ಮೂವರನ್ನು ಬಿಡುಗಡೆ ಮಾಡಲಾಗಿದೆ. ನಾಳೆಯಿಂದ ನಗರದಲ್ಲಿ ಮೂರು ವಿಭಾಗದಲ್ಲಿ ಕೊರೊನಾ ರೋಗಕ್ಕೆ ಚಿಕಿತ್ಸೆ ನೀಡಲು ಆರಂಭಿಸಲಾಗುತ್ತದೆ.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಡೆಲಿಟೇಡ್ ಹೆಲ್ತ್ ಸೆಂಟರ್ ಕೊರೊನಾ ರೋಗದ ಜೊತೆಗೆ ಇತರೆ ರೋಗದ ಬಾಧೆ ಇರುವಂತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಗುತ್ತೂರು ಹಾಸ್ಟೆಲ್ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್ನಲ್ಲಿ ರೋಗ ಲಕ್ಷಣಗಳು ಕಡಿಮೆ ಪ್ರಮಾಣದಲ್ಲಿ ಇರುವಂತಹ ವ್ಯಕ್ತಿಗಳಿಗೆ ಇಲ್ಲಿ ಚಿಕಿತ್ಸೆ ಭರಿಸಲಾಗುತ್ತದೆ. ಇದರಲ್ಲಿ ಗುಣವಾಗಿದೇ ಇರುವವರನ್ನು ದಾವಣಗೆರೆ ಸಿ.ಜಿ. ಆಸ್ಪತ್ರೆಗೆ ರವಾನಿಸಲಾಗುತ್ತದೆ ಎಂದು ಹೇಳಿದರು.
ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ಸಾರ್ವಜನಿಕರು ಭಯದಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಗಂಟೆಗೆ ಒಂದು ಕಾನೂನು ತಂದು ಹೇಳಿಕೆಗಳನ್ನು ಬಿಡುಗಡೆ ಮಾಡುವ ಮೂಲಕ ಸಾರ್ವಜನಿಕರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ನಗರದ ಛೇಂಬರ್ ಆಫ್ ಕಾಮರ್ಸ್ ಇವರು ಸ್ವಯಂ ಪ್ರೇರಿತರಾಗಿ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಿ ನಂತರದಲ್ಲಿ ಅಂಗಡಿ ಮುಂಗಟ್ಟನ್ನು ಬಂದ್ ಮಾಡುವುದಕ್ಕೆ ಮುಂದಾಗಿದ್ದಾರೆ. ಆದರೆ ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪನವರು ನಿನ್ನೆ ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದ್ದಾರೆ ಎಂದು ರಾತ್ರಿ 8 ಗಂಟೆಯವರೆಗೆ ಅಂಗಡಿ ಮುಂಗಟ್ಟನ್ನು ತೆರೆದುಕೊಂಡು ವ್ಯಾಪಾರ, ವಹಿವಾಟು ಮಾಡುವುದಕ್ಕೆ ಸೂಚನೆ ನೀಡಿದ್ದಾರೆ.
ಇದರಿಂದ ಸಾರ್ವಜನಿಕರು ಇವರ ಯಾವ ಆದೇಶವನ್ನು ಪಾಲನೆ ಮಾಡಬೇಕು ಎಂದು ತಿಳಿಯಲಾಗದೆ ಗೊಂದಲಕ್ಕೆ ಸಿಲುಕಿದ್ದಾರೆ.
ಆದಷ್ಟು ಬೇಗ ಸರ್ವ ಪಕ್ಷಗಳ ಮುಖಂಡರ ಸಭೆಯನ್ನು ಆಯೋಜಿಸಿ ಒಂದು ನಿರ್ದಿಷ್ಟ ತೀರ್ಮಾನವನ್ನು ಕೈಗೊಂಡು ಸಾರ್ವಜನಿಕರಿಗೆ ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಕಲ್ಪಿಸಬೇಕಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ರಾಣೇಬೆನ್ನೂರಿನ 53 ವರ್ಷದ ವ್ಯಕ್ತಿ ನಗರದ ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯಲ್ಲಿ ಮೃತಪಟ್ಟಿ ದ್ದಾರೆ. ಹರಿಹರದ 55 ವರ್ಷದ ಮಹಿಳೆ ಹಾಗೂ ಹಾವೇರಿ ಜಿಲ್ಲೆಯ ಕನವಳ್ಳಿಯ 60 ವರ್ಷದ ವ್ಯಕ್ತಿ ನಗರದ
ಸಿ.ಜಿ. ಆಸ್ಪತ್ರೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ 50 ವರ್ಷ ಮೀರಿದವರಾಗಿದ್ದು, ಅವರು ಸಕ್ಕರೆ ಕಾಯಿಲೆ ಹಾಗೂ ಅತಿ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರು.
ದಾವಣಗೆರೆಯ ಮಿಲ್ಲತ್ ಕಾಲೋನಿ, ನಿಟುವಳ್ಳಿ, ಭಗತ್ ಸಿಂಗ್ ನಗರ, ಎಂ.ಸಿ.ಸಿ. ಬಿ ಬ್ಲಾಕ್, ಕೆ.ಬಿ. ಬಡಾವಣೆ, ಅಹಮದ್ ನಗರ, ಸಿದ್ದವೀರಪ್ಪ ಬಡಾವಣೆ, ಕುವೆಂಪು ನಗರ, ಭರತ್ ಮಿಲ್ ಕಾಂಪೌಂಡ್ ಹಾಗೂ ತಾಲ್ಲೂಕಿನ ದೊಡ್ಡಬಾತಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ತಾಲ್ಲೂಕಿನಲ್ಲಿ ಒಟ್ಟು ಹದಿನಾಲ್ಕು ಪ್ರಕರಣಗಳು ಕಂಡು ಬಂದಿವೆ.
ಹರಿಹರದಲ್ಲಿ ಎರಡು ಕೊರೊನಾ ಪ್ರಕರಣಗಳು ಕಂಡು ಬಂದಿವೆ.
ಜಗಳೂರಿನಲ್ಲಿ ಎರಡು ಮತ್ತು ಹೊನ್ನಾಳಿ ತಾಲ್ಲೂಕಿನ ಚಿನ್ನಿಕಟ್ಟೆ, ಬಿದರಹಳ್ಳಿಗಳಲ್ಲಿ ತಲಾ ಒಂದು ಸೋಂಕು ಪ್ರಕರಣ ಕಂಡು ಬಂದಿದೆ.