ಮಲೇಬೆ ನ್ನೂರು, ಅ.15- ಪಟ್ಟಣಕ್ಕೆ ಬುಧವಾರ ಸಂಜೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಮಾಸ್ಕ್ ಧರಿಸದ ಜನರಿಗೆ ದಂಡ ಹಾಕಿ, ಜಾಗೃತಿ ಮೂಡಿಸಿದರು.
ಮಾಸ್ಕ್ ಇರುವುದು ಜೇಬಿನಲ್ಲಿ ಇಟ್ಟುಕೊಳ್ಳಲು ಅಲ್ಲ, ಮುಖಕ್ಕೆ ಹಾಕಿಕೊಳ್ಳಿ. ಇಲ್ಲದಿದ್ದರೆ ಕೊರೊನಾ ಬರುತ್ತದೆ ಎಂದು ಕಿವಿಮಾತು ಹೇಳಿದರು.
ಮಾಸ್ಕ್ ಧರಿಸದೇ ರಸ್ತೆಯಲ್ಲಿ ಬಂದವರಿಗೆ ಬೆನ್ನತ್ತಿ ದಂಡ ಹಾಕಿ ಎಂದು ಪೊಲೀಸರಿಗೆ, ಪುರಸಭೆ ಅಧಿಕಾರಿಗಳಿಗೆ ಹೇಳಿದರು. ಮಾಸ್ಕ್ ಹಾಕದವರಿಗೆ ದಂಡ ಹಾಕಿ ಹೊಸ ಮಾಸ್ಕ್ ನೀಡಿದ ಜಿಲ್ಲಾಧಿಕಾರಿಗಳು, ಪಟ್ಟಣದ ಮುಖ್ಯರಸ್ತೆ, ಸಂತೆ ರಸ್ತೆ, ನಂದಿಗುಡಿ ರಸ್ತೆ, ಆಜಾದ್‌ನಗರಗಳಲ್ಲಿ ಸಂಚರಿಸಿ, ಮಾಸ್ಕ್ ಬಗ್ಗೆ ಜನರಿಗೆ ಅರಿವು ಮೂಡಿಸಿದರು.
ಅಂಗಡಿಗಳಿಗೆ ತೆರಳಿ ಮಾಲೀಕರಿಗೆ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಿ.ಅಂಗಡಿಗೆ ಬರುವವರು ಮಾಸ್ಕ್ ಹಾಕಿಕೊಂಡು ಬಂದರೆ ಮಾತ್ರ ಸಾಮಾನು ಕೊಡಿ ಎಂದು ತಾಕೀತು ಮಾಡಿದರು. ಒಟ್ಟು 70 ಜನರಿಗೆ 100 ರೂ.ಗಳಂತೆ ದಂಡ ಹಾಕಿದರು.
ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಎಎಸ್‌ಐ ಬಸವರಾಜ್, ಪುರಸಭೆ ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್ ಮತ್ತಿತರರು ಈ ವೇಳೆ ಹಾಜರಿದ್ದರು.