ಕೋವಿಡ್ ಚಿಕಿತ್ಸಾ ಸಲಕರಣೆಗಳ ಖರೀದಿ ಅವ್ಯವಹಾರ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಎಐವೈಎಫ್ ಪ್ರತಿಭಟನೆ

ಹರಪನಹಳ್ಳಿ, ಜು.10- ಕೊರೊನಾ ಚಿಕಿತ್ಸಾ ಸಲಕರಣೆಗಳ ಖರೀದಿಯಲ್ಲಿ ರಾಜ್ಯ ಸರ್ಕಾರದ ಮೇಲೆ ಕೇಳಿಬಂದಿರುವ ಆರೋಪದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಮತ್ತು   ಜನತೆಯ ಹಿತದೃಷ್ಟಿಯಿಂದ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಪಡೆಯುವಂತೆ ಸುಗ್ರೀವಾಜ್ಞೆ  ಹೊರಡಿಸುವಂತೆ ಒತ್ತಾಯಿಸಿ, ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್)ನ ಪದಾಧಿಕಾರಿಗಳು ಇಂದಿಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್)ನ ರಾಜ್ಯ ಕಾರ್ಯದರ್ಶಿ ಹೆಚ್.ಎಂ.ಸಂತೋಷ್ ಮಾತನಾಡಿ,  ವೆಂಟಿಲೇಟರ್, ಪಿ.ಪಿ.ಇ ಕಿಟ್, ಮಾಸ್ಕ್‌, ಸರ್ಜಿಕಲ್ ಕೈಗವಸು, ಪರೀಕ್ಷೆ ಗವಸು, ಆಮ್ಲಜನಕದ ಸಿಲಿಂಡರ್, ಕೋವಿಡ್ ಪರೀಕ್ಷೆ ಹಾಗೂ ಸೋಂಕಿತರ ದಿನದ ಖರ್ಚುಗಳಲ್ಲಿ  ಭಾರೀ ಅಕ್ರಮ ನಡೆಸಿದೆ ಎಂಬ ಗಂಭೀರ ಆರೋಪವನ್ನು ವಿರೋಧ ಪಕ್ಷದ ನಾಯಕರು ಮಾಡಿದ್ದಾರೆ. ವಿರೋಧ ಪಕ್ಷದ ಆರೋಪದ ಸತ್ಯಾಸತ್ಯತೆಯನ್ನು ತಿಳಿಯಲು ಈ ಚಿಕಿತ್ಸಾ ಸಲಕರಣೆಗಳ ಖರೀದಿಯ ಸಂಪೂರ್ಣ ವ್ಯವಹಾರವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ಎಐವೈಎಫ್‌ನ ತಾಲ್ಲೂಕು ಅಧ್ಯಕ್ಷ ಎಸ್.ಸುರೇಶ್ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಅವಕಾಶ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಶುಲ್ಕವನ್ನು ನಿಗದಿಪಡಿಸಿದೆ. ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿಪಡಿಸಿದ ದರದಂತೆ ಓರ್ವ ಸೋಂಕಿತ ವ್ಯಕ್ತಿಯು ಸಾಮಾನ್ಯ ಸೌಲಭ್ಯ ಪಡೆದು ಗುಣಮುಖನಾಗಲು ಅಂದಾಜು ಲಕ್ಷಕ್ಕೂ ಅಧಿಕ ಹಣವನ್ನು ವ್ಯಯಿಸಬೇಕು. ಅದೇ ಖಾಸಗಿ ಆಸ್ಪತ್ರೆಯಲ್ಲಿ ವಿಶೇಷ ಸೌಲಭ್ಯ ಪಡೆದು ಗುಣಮುಖನಾಗಲು ಅಂದಾಜು ಎರಡರಿಂದ ಎರಡೂವರೆ ಲಕ್ಷ ವ್ಯಯ ಮಾಡಬೇಕು. ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕವಾಗಿ ಹೊರೆಯಾಗುತ್ತದೆ. ಸರ್ಕಾರವು ಖಾಸಗಿ ಆಸ್ಪತ್ರೆ ಗಳಿಗೆ ನಿಗದಿ ಪಡಿಸಿದ ಹಣವನ್ನು ಒಬ್ಬ ವ್ಯಕ್ತಿಗೆ ಬರಿಸಲು ಕಷ್ಟವಾಗುತ್ತಿರುವಾಗ, ಈ ಸೋಂಕು ಒಂದೇ ಮನೆಯಲ್ಲಿ ಒಬ್ಬರಿಗಿಂತ ಅಧಿಕ ಜನರಿಗೆ ತಗುಲಿದರೆ, ಆ ಇಡೀ ಕುಟುಂಬವು ಚಿಕಿತ್ಸೆ ಪಡೆಯಲು, ತಮ್ಮ ಜೀವಮಾನದ ಸಂಪಾದನೆಯ ಜೊತೆಗೆ ಸಾಲವನ್ನೂ ಮಾಡಬೇಕಾಗುತ್ತದೆ ಎಂದರು.

ಸಂಘಟನಾ ಕಾರ್ಯದರ್ಶಿ ಮುಜೀಬುರ್‌ ರೆಹಮಾನ್ ಮಾತನಾಡಿ, ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಸರಿಯಾದ ಚಿಕಿತ್ಸೆಗಳು ದೊರಕುತ್ತಿಲ್ಲ. ಚಿಕಿತ್ಸೆ ದೊರಕದ ಕಾರಣಕ್ಕೆ ಹಲವರು ಪ್ರಾಣ ಕಳೆದು ಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಕಾಶೀನಾಥ್, ರಾಮಕೃಷ್ಣ, ಮಹ್ಮದ್, ಮುಬಾರಕ್, ಯಾಸೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!