ಬಂಗಾರಪೇಟೆ ತಹಶೀಲ್ದಾರ್ ಹತ್ಯೆ: ಸರ್ಕಾರಿ ನೌಕರರ ಪ್ರತಿಭಟನೆ

ದಾವಣಗೆರೆ, ಜು.10- ಬಂಗಾರಪೇಟೆ ತಾಲ್ಲೂಕು ತಹಶೀಲ್ದಾರ್ ಬಿ.ಕೆ. ಚಂದ್ರಮೌಳೇಶ್ವರ ಅವರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿರುವ ಜಿಲ್ಲಾ ಸರ್ಕಾರಿ ನೌಕರರು, ಹತ್ಯೆ ಹಿನ್ನೆಲೆಯಲ್ಲಿ ಕಠಿಣ ಕಾನೂನು ರೂಪಿಸಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಅಗತ್ಯ ರಕ್ಷಣೆ ನೀಡುವಂತೆ ಆಗ್ರಹಿಸಿ ನಗರದಲ್ಲಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾ ನಿರತ ಸರ್ಕಾರಿ ನೌಕರರು, ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸುವ ಸಂದರ್ಭಗಳಲ್ಲಿ ಹಲ್ಲೆ ಮತ್ತು ದೌರ್ಜನ್ಯಗಳು ಆಗಿಂದಾಗ್ಗೆ ಸಂಭವಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. 

ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ತಹಶೀಲ್ದಾರ್ ಗಿರೀಶ್, ಸಂಘಟನೆಯ ಗೌರವಾಧ್ಯಕ್ಷ ಡಾ. ಉಮೇಶ್, ಕಾರ್ಯದರ್ಶಿ ಬಿ. ಶಿವಣ್ಣ, ಖಜಾಂಚಿ ಎಸ್. ಕಲ್ಲೇಶ್ವರಪ್ಪ, ರಾಜ್ಯ ಪರಿಷತ್ ಸದಸ್ಯ ಎನ್. ಮಾರುತಿ, ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಲೋಹಿತ್, ಕಂದಾಯ ಇಲಾಖೆ ನೌಕರರ ಸಂಘದ ಕಾರ್ಯದರ್ಶಿ ಅಜ್ಜಯ್ಯ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!