ಸಮಾಜಕ್ಕೆ ಒಳಿತು ಮಾಡುವುದು ನಮ್ಮ ಧ್ಯೇಯವಾಗಬೇಕು

ಡಾ. ಎ.ಎಂ. ಶಿವಕುಮಾರ್ ಆಶಯ

ದಾವಣಗೆರೆ, ಜು.9- ದಾವಣಗೆರೆ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳಾದ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ, ಕಾರ್ಯದರ್ಶಿ ಅಂದನೂರು ಆನಂದ್ ಕುಮಾರ್, ಖಜಾಂಚಿ ಬೇತೂರು ಜಗದೀಶ್  ಅವರುಗಳ ಪದಗ್ರಹಣ ಸಮಾರಂಭವು ರೋಟರಿ ಸಿ. ಕೇಶವಮೂರ್ತಿ ಸಭಾಂಗಣದಲ್ಲಿ   ನಿನ್ನೆ ನಡೆಯಿತು. ರೋಟರಿ ಸಂಸ್ಥೆ 316 ಜಿಲ್ಲೆಯ ಮಾಜಿ  ರಾಜ್ಯಪಾಲ ನಯನ್ ಪಾಟೀಲ್ ಪದಗ್ರಹಣ ನೆರವೇರಿಸಿದರು. 

ಅಧಿಕಾರ ಸ್ವೀಕರಿಸಿ ಮಾತನಾಡಿದ ರೋಟರಿ ನೂತನ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ, ಚಿಕ್ಕವರಿದ್ದಾಗ ಆರೋಗ್ಯವೇ ಭಾಗ್ಯ ಎಂದು ಓದಿದ್ದೇವಷ್ಟೆ.  ಇದೀಗ ಕೊರೊನಾ ವೈರಸ್ ನಿಂದಾಗಿ ಬಹುತೇಕ ನಮಗೆಲ್ಲಾ ಅದು ಅನುಭವಕ್ಕೆ ಬಂದಿದೆ ಎಂದರಲ್ಲದೇ, ತಮ್ಮ ಅಧ್ಯಕ್ಷಾವಧಿಯಲ್ಲಿ ನಡೆಸಲುದ್ದೇಶಿಸಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಸಮಾಜಕ್ಕೆ ಒಳಿತು ಮಾಡುವುದು ನಮ್ಮ ಧ್ಯೇಯವಾಗಬೇಕು - Janathavani

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಿವಿ-ಮೂಗು-ಗಂಟಲು ತಜ್ಞ ಡಾ. ಎ. ಎಂ. ಶಿವಕುಮಾರ್ ಮಾತನಾಡಿ, ಸಮಾಜಕ್ಕೆ ಒಳಿತು ಮಾಡುವುದು ನಮ್ಮ ಧ್ಯೇಯವಾಗಬೇಕು. ಗಳಿಕೆಯಲ್ಲಿ ನಾವು ಏನು ಬಿಟ್ಟು ಹೋಗುತ್ತೇವೆ, ಕೊಟ್ಟು ಹೋಗುತ್ತೇವೆ ಎನ್ನುವುದರಲ್ಲಿ ವ್ಯತ್ಯಾಸವಿದೆ. ಬಿಟ್ಟು ಹೋದದ್ದು ಸಂಬಂಧಪಟ್ಟವರಿಗೆ ತಲುಪಿತೋ ಇಲ್ಲವೋ ನಮಗೆ ಗೊತ್ತಾಗುವುದಿಲ್ಲ. ನಾವು ಇದ್ದಾಗಲೇ ಕೊಟ್ಟಿದ್ದು ನಮಗೆ ಗೊತ್ತಾಗಿರುತ್ತದೆ. ಸಮಾಧಾನವಿರುತ್ತದೆ. ಸೇವಾ ಕೊಡುಗೆಯ ವಿಷಯದಲ್ಲಿ ನಾವು ಕೊಡುವುದನ್ನು ಅವಶ್ಯಕತೆ ಇದ್ದವರಿಗೆ ಕೊಟ್ಟರೆ ನೆಮ್ಮದಿ ಇರುತ್ತದೆ ಎಂದು ಮಾರ್ಮಿಕವಾಗಿ ವಿಶ್ಲೇಷಿಸಿದರು.

ರೋಟರಿ ಜಿಲ್ಲೆಯ ಉಪ ರಾಜ್ಯಪಾಲ ಚಂದ್ರಚಾರ್ ಉಪಸ್ಥಿತರಿದ್ದರು. ಮಾಜಿ ಉಪ ರಾಜ್ಯಪಾಲ ಆರ್.ಎಸ್. ವಿಜಯಾನಂದ ಕಾರ್ಯಕ್ರಮ ನಿರೂಪಿಸಿದರು. ಕು. ತನುಶ್ರೀ ಉಮಾಶಂಕರ್ ಪ್ರಾರ್ಥನೆ ಮಾಡಿದರೆ ಉತ್ತಂಗಿ ಬಸವರಾಜ್ ವಂದಿಸಿದರು.

ರೋಟರಿ ಭವನದ ಆವರಣದ ಇನ್ನೊಂದು ಬದಿಯ ರೋಟರಿ ಬಾಲ ಭವನದಲ್ಲಿ ಏರ್ಪಾಡಾಗಿದ್ದ ಇನ್ನರ್ ವ್ಹೀಲ್ ಸಮಾರಂಭದಲ್ಲಿ ಶ್ರೀಮತಿ ಶೋಭಾ ಧನಂಜಯ್ ಅಧ್ಯಕ್ಷರಾಗಿ, ಶ್ರೀಮತಿ ಆಶಾ ಜಗದೀಶ್ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ಶ್ರೀಮತಿ ಸುರೇಖಾ ಚಿಗಟೇರಿ ಪದಗ್ರಹಣ ನೆರವೇರಿಸಿದರು. ಪದ್ಮಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ನಡೆದ ವನ ಮಹೋತ್ಸವ ಕಾರ್ಯಕ್ರಮವನ್ನು ಮುರುಘ ರಾಜೇಂದ್ರ ಚಿಗಟೇರಿ ಸಸಿ ನೆಡುವುದರ ಮೂಲಕ ನೆರವೇರಿಸಿದರು. 

ಆರಂಭದಲ್ಲಿ ಸಿ. ಕೇಶವಮೂರ್ತಿ ಅವರನ್ನು ಸ್ಮರಿಸಲಾಯಿತು. ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

error: Content is protected !!