ದಾವಣಗೆರೆ, ಅ.12- ಇಡೀ ಕುಕ್ಕುಟ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿರುವ ವೆಂಕಟೇಶ್ವರ ಹ್ಯಾಚರೀಸ್ (ವೆಂಕಾಬ್) ಸಂಸ್ಥೆಯು ರೈತರ ಹೆಸರಿನಲ್ಲಿ ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರೀಡರ್ಸ್ ಅಸೋಸಿ ಯೇಷನ್ (ಕೆಪಿಎಫ್ಬಿಎ) ಸ್ಥಾಪಿಸಿಕೊಂಡು ಕೋಳಿ ಸಾಕಾಣಿಕೆದಾರರು ಮತ್ತು ಗ್ರಾಹಕರನ್ನು ಶೋಷಣೆ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಲ್ಲಾಪುರ ದೇವರಾಜ್ ಆರೋಪಿಸಿದರು.
ನಮ್ಮ ದೇಶದಲ್ಲಿ ಬಹುರಾಷ್ಟ್ರೀಯ ಮತ್ತು ದೇಶಿಯ ಬಂಡವಾಳಶಾಹಿ ಕಂಪನಿಗಳಾದ ವೆಂಕಟೇಶ್ವರ್ ಹ್ಯಾಚರೀಸ್, ಕೋರಿಯನ್ ಪಾಂಗ್ ಪಾಂಡ್, ಗೋದ್ರೇಜ್ ಕಂಪನಿಗಳಂತಹ ಇನ್ನಿತರೆ ಕಂಪನಿಗಳು ಸೇರಿಕೊಂಡು ಕೋಳಿ ಸಾಕಾಣಿಕೆಯ ರೈತರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರೀಡರ್ಸ್ ಅಸೋಷಿಯೇಷನ್ ಸ್ಥಾಪಿಸಿಕೊಂಡು ರೈತರಿಗೆ ವಂಚನೆ ಮಾಡುತ್ತಿವೆ. ವೆಂಕಾಬ್ ಚಿಕನ್ಸ್ ಸರ್ಕಾರದ ಮೇಲೂ ತನ್ನ ಪ್ರಾಬಲ್ಯ ಸಾಧಿಸಿ, ತನಗೆ ಬೇಕಾದ ಕಾಯ್ದೆ ರೂಪಿಸಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಪಾದಿಸಿದರು.
ಕೋಳಿ ಮಾಂಸ ಉತ್ಪಾದನೆ ಮಾಡುವ ತಳಿಯ ಮೊಟ್ಟೆ ಮತ್ತು ಕೋಳಿ ಪಿಳ್ಳೆಗಳು ದಕ್ಷಿಣ ಭಾರತದಲ್ಲಿ ವೆಂಕಾಬ್ ಚಿಕನ್ಸ್ ಬಿಟ್ಟರೆ ಬೇರೆ ಯಾರ ಬಳಿಯಲ್ಲೂ ದೊರೆಯುವುದಿಲ್ಲ. ಹೀಗಾಗಿ ಕೋಳಿ ಮಾಂಸ ಉತ್ಪಾದಿಸುವ ತಳಿಯ 25 ಗ್ರಾಂ ಪಿಳ್ಳೆ ಉತ್ಪಾದನೆಗೆ 15 ರೂ. ಉತ್ಪಾದನಾ ವೆಚ್ಚವಾಗುತ್ತದೆ. ಆದರೆ, ಇವರು ಒಂದು ಕೋಳಿ ಪಿಳ್ಳೆಗೆ 50 ರೂ. ಮತ್ತು ಮೊಟ್ಟೆ ಉತ್ಪಾದಿಸುವ ಕೋಳಿ ಮರಿಗೆ 300 ರೂ. ದರ ನಿಗದಿ ಮಾಡಿ ಕೋಳಿ ಸಾಕಾಣಿಕೆದಾರರನ್ನು ಶೋಷಣೆ ಮಾಡುತ್ತಿದೆ. ಅಲ್ಲದೆ, 100-110 ರೂ.ಗಳಿಗೆ ಸಿಗಬೇಕಾದ ಒಂದು ಕೆಜಿ ಕೋಳಿ ಮಾಂಸದ ದರವನ್ನು 200 ರೂ.ಗಳಷ್ಟು ನಿಗದಿ ಮಾಡಿ ಗ್ರಾಹಕರನ್ನು ಸಹ ಸುಲಿಗೆ ಮಾಡುತ್ತಿದೆ ಎಂದು ದೂರಿದರು.
ನಾಟಿ ಕೋಳಿ ಸಾಕಾಣಿಕೆಗೆ ಮುಂದಾಗೋಣವೆಂದರೆ ಈ ನಾಟಿ ಕೋಳಿ ಮರಿಗಳನ್ನು 100ರಿಂದ 125 ದಿನಗಳವರೆಗೆ ಸಾಕಿದರೆ ಒಂದರಿಂದ ಒಂದೂವರೆ ಕೆಜಿ ತೂಕ ಮಾತ್ರ ಬರಲಿದೆ. ಆದರೆ ವಿಧಿ ಇಲ್ಲದೆ ಕೋಳಿ ಸಾಕಾಣಿಕೆದಾರರು ವೆಂಕಾಬ್ ಬಳಿ ಹೆಚ್ಚಿನ ತೂಕ ಬರುವ ಕೋಳಿ ಮರಿಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸಲಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕೋಳಿ ಸಾಕಾಣಿಕೆದಾರರ ಮತ್ತು ಕೋಳಿ ಮಾಂಸ ಖರೀದಿಸುವ ಗ್ರಾಹಕರ ಹಿತ ದೃಷ್ಟಿಯಿಂದ ತಕ್ಷಣವೇ ಕೋಳಿ ಮರಿಗಳ ಮತ್ತು ಕೋಳಿ ಮಾಂಸದ ದರವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿ, ಇದೇ ಅಕ್ಟೋಬರ್ 19ರಂದು ಬೆಂಗಳೂರಿನ ಕೆಪಿಎಫ್ಬಿಎ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದರು.
ರಾಜ್ಯ ಉಪಾಧ್ಯಕ್ಷ ಜಿ.ಟಿ. ನೂರುದ್ದೀನ್ ಮಾತನಾಡಿ, ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಕೋಳಿ ಸಾಕಾಣಿಕೆ ರೈತರಿದ್ದಾರೆ. ಕೋಳಿ ಮಾಂಸದ ಉದ್ಯಮದ ಮೇಲೆ ಹಿಡಿತ ಇಟ್ಟುಕೊಂಡಿರುವ ಕಂಪನಿಗಳ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಬೇಕು. ಕೆಪಿಎಫ್ಬಿಎ ಹೆಸರಿನ ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ಮಾಡಿ ಕಂಪನಿಗಳು ಗಳಿಸಿರುವ ವ್ಯವಹಾರದ ಲಾಭದಲ್ಲಿ ಸರ್ಕಾರಕ್ಕೆ ತೆರಿಗೆ ಕಟ್ಟಿಸಿಕೊಳ್ಳಬೇಕು. ರಾಜ್ಯದ ರೈತರಿಗೆ ಮಾರುಕಟ್ಟೆ ನೀಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಓ.ಬಿ. ಗುರುಮೂರ್ತಿ, ಬನ್ನಿಕೋಡು ಅಭಿಷೇಕ್ ಸೇರಿದಂತೆ ಇತರರು ಇದ್ದರು.