ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹಂಚಿಕೆ : ಗೆಜೆಟ್ ಪ್ರಕಟಣೆ ಮಾಡಲು ಆಗ್ರಹ

ಜಗಳೂರು, ಜು.7- ತಾಲ್ಲೂಕಿಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ‌ ತಜ್ಞರ‌ ಸಮಿತಿ ವರದಿಯನ್ವಯ  ಭದ್ರಾ ಮೇಲ್ದಂಡೆ ಯೋಜನೆಯಡಿ 2.4 ಟಿಎಂಸಿ ನೀರು ಹರಿಸುವಂತೆ ಅಂಗೀಕರಿಸಿದ್ದು, ಕೂಡಲೇ ಆಡಳಿತ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸುವಂತೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಲಾಗಿದೆ ಎಂದು ನೀರಾವರಿ ಹೋರಾಟ ಸಮಿತಿಯ ಸದಸ್ಯ ಕೆ.ಬಿ.ಕಲ್ಲೇರುದ್ರೇಶ್ ಆಗ್ರಹ ಪಡಿಸಿದ್ದಾರೆ.

ಇಂದಿಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಒಂಬತ್ತು ಕೆರೆಗಳನ್ನು ಸೇರಿಸಲಾಗಿದೆ. ಭದ್ರಾ ಯೋಜನೆ ಜಾರಿ ತಡವಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ 57 ಕೆರೆಗಳ ತುಂಗಭದ್ರಾ ನದಿಯಿಂದ ನೀರು ಬರುವ ಯೋಜನೆಯಲ್ಲಿ ಈ 9 ಕೆರೆಗಳನ್ನು ಸರ್ಕಾರ  ಕೈಬಿಡಬಾರದು ಎಂದು ಒತ್ತಾಯಿಸಿದರು.

ಎರಡು ಮೂರು ವರ್ಷಗಳಿಗೆ ಅಪ್ಪರ್ ಭದ್ರಾ ನೀರು ನಮ್ಮ ರೈತರ ಜಮೀನಿಗೆ ಬರುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಇದು ಸಾಧ್ಯವಿಲ್ಲ. ಏಕೆಂದರೆ ನೀರು ಹಂಚಿಕೆ ಆಗಿರುವುದನ್ನು ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಿಲ್ಲ. 

ಯಾರಾದರೂ 2-3 ವರ್ಷಗಳ ಒಳಗೆ ಅಪ್ಪರ್ ಭದ್ರಾ ನೀರು ನಮ್ಮ ತಾಲ್ಲೂಕಿನ ರೈತರ ಜಮೀನಿಗೆ ಕೊಟ್ಟರೆ, ಅವರ ಪ್ರತಿಮೆಗಳನ್ನು ಸಂಗೇನಹಳ್ಳಿ ಕೆರೆ ಅಥವಾ ದೊಣ್ಣೆಹಳ್ಳಿ ಸರ್ಕಲ್‌ನಲ್ಲಿ ಅನಾವರಣ ಮಾಡುತ್ತೇವೆ ಎಂದು ಅವರು ವ್ಯಂಗ್ಯವಾಗಿ ತಿಳಿಸಿದರು.

ಹಲವಾರು ಹೋರಾಟದ ಫಲವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ದೇಸಾಯಿ ಸಮಿತಿಯ ಅಧ್ಯಕ್ಷತೆಯಲ್ಲಿ ದಿನಾಂಕ 25 ಜುಲೈ 2019 ರಂದು ಜಗಳೂರು ತಾಲ್ಲೂಕು ಮತ್ತು 9 ಕೆರೆಗಳನ್ನೊಳಗೊಂಡಂತೆ ತುಂಗಭದ್ರಾ ನೀರು ಹರಿಸುವಂತೆ ವರದಿ ಸಲ್ಲಿಸಲಾಗಿತ್ತು. ಆದರೆ, ಆಡಳಿತ ಸರ್ಕಾರಗಳು ಇಂದಿಗೂ ಯಾವುದೇ ತೀರ್ಮಾನ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದರು.

ಸರ್ಕಾರ ಕೂಡಲೇ ಸಮಿತಿಯ ವರದಿಯನ್ನು ಅಂಗೀಕರಿಸಿ, ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕು. ಮುಂದೆ ಪ್ರತಿಭಟನೆ ಮಾಡಲು ಅವಕಾಶ ನೀಡಬಾರದು ಎಂದರು.

error: Content is protected !!