ಪ್ರಬುದ್ಧ ಪ್ರತಿಭಟನೆಗೆ ಸಿಗಬೇಕಿದೆ ನ್ಯಾಯ…!

 ವಿದ್ಯಾರ್ಥಿಗಳು ಕಷ್ಟಪಟ್ಟು ಓದಿದ್ದಾರೆ. ತಮ್ಮ ವಿದ್ಯಾ ಪ್ರತಿಭೆಯಿಂದ ಸರ್ಕಾರಿ ವೈದ್ಯಕೀಯ ವ್ಯಾಸಂಗದ ಸ್ಥಾನವನ್ನು ಗಿಟ್ಟಿಸಿದ್ದಾರೆ. ಕಷ್ಟಪಟ್ಟು ಓದುತ್ತಾ ಈಗ ಸಹಾಯಕ ವೈದ್ಯರಾಗಿ ಚಿಗಟೇರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ. ಈ ಕೋವಿಡ್ ಸಂದರ್ಭದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸೇವೆಯನ್ನೂ ಮಾಡುತ್ತಿದ್ದಾರೆ. ಇವರ ಸಹಕಾರವನ್ನು ಪಡೆದುಕೊಳ್ಳುತ್ತಿರುವ ಸರ್ಕಾರ ಅಥವಾ ಸಂಬಂಧಪಟ್ಟವರು ಸುಮಾರು ಒಂದೂವರೆ ವರ್ಷಗಳಿಂದ ಇವರಿಗೆ ಶಿಷ್ಯ ವೇತನವನ್ನು ಇಲ್ಲಿಯವರೆಗೂ ಕೊಟ್ಟಿಲ್ಲ! ಕೇಳಲು ಹೋದರೆ ಅವರ ಮೇಲೆ ಇವರು, ಇವರ ಮೇಲೆ ಅವರು ಜವಾಬ್ದಾರಿಯನ್ನು ಹೊರಿಸುತ್ತಿದ್ದಾರೆ. ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣ ಕುರುಡನ್ನು ಪ್ರದರ್ಶಿಸಿ, ಕಣ್ಣಾ ಮುಚ್ಚಾಲೆ ಆಡುತ್ತಿದ್ದಾರೆ. ಪಾಪ ಈ ವಿದ್ಯಾರ್ಥಿಗಳು ಸರ್ಕಾರ – ಕಾಲೇಜ್ ಮ್ಯಾನೇಜ್ ಮೆಂಟ್ ಜಗ್ಗಾಟದಲ್ಲಿ ನಜ್ಜು ಗುಜ್ಜಾಗಿದ್ದಾರೆ. ದಾವಣಗೆರೆಯ ಜೆ.ಜೆ.ಎಂ ವೈದ್ಯಕೀಯ ಸ್ನಾತಕೋತ್ತರ ಮತ್ತು ಗೃಹ ವೈದ್ಯಕೀಯ ವಿದ್ಯಾರ್ಥಿಗಳ ಈ ಸಂಕಟದ ಸ್ಥಿತಿ ಈಗ ದೇಶಾದ್ಯಂತ ಚರ್ಚೆಗೊಳಗಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಅಧ್ಯಯನ ತಂಡ ಹಲವರನ್ನು ಭೇಟಿ ಮಾಡಿ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಕೆಲವು ಮುಖ್ಯ ಅಂಶಗಳನ್ನು ಸಾಂದ್ರೀ ಕರಿಸಿ ಓದುಗರ ಗಮನಕ್ಕೆ ತರುತ್ತಿದ್ದೇವೆ. ವಿಚಿತ್ರ ಸನ್ನಿವೇಶವೆಂದರೆ, ಅನಿಸಿಕೆಗಳನ್ನು ವ್ಯಕ್ತಪಡಿಸಿರುವ ಹಲವು ವೈದ್ಯರ, ಸಾಮಾಜಿಕ ಸಂಘಟನೆಗಳ ಮತ್ತು ಪ್ರಾಮಾಣಿಕ ಸರಕಾರಿ ಅಧಿಕಾರಿಗಳ ಹೆಸರುಗಳನ್ನೂ ಸಹ ನಾವು ಬಹಿರಂಗಗೊಳಿಸುವಂತಿಲ್ಲ! ಬಹಿರಂಗಪಡಿ ಸಿದರೆ ಸರ್ಕಾರದಿಂದ ಅಥವಾ ಅವರ ಮೇಲೆ ಅಧಿಕಾರ ಹೊಂದಿರುವ ವ್ಯಕ್ತಿಗಳಿಂದ ಆಗಬಹುದು ತೊಂದರೆ. ಇದು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಸದ್ಯದ ಸಂಕಟ.

ಎಲ್ಲಾ ಕಡೆಗಳಿಂದ ಬಂದಿರುವ ಮೆಚ್ಚುಗೆಯ ಮಾತುಗಳೆಂದರೆ, ಈ ವಿದ್ಯಾರ್ಥಿಗಳು ಇಲ್ಲಿಯವರೆಗೂ ತಮ್ಮ ಪ್ರತಿಭಟನೆಯಿಂದ ಯಾರಿಗೂ ತೊಂದರೆ ಕೊಟ್ಟಿಲ್ಲ, ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡಿಲ್ಲ, ತಮ್ಮ ಕರ್ತವ್ಯವನ್ನೂ ಸಹ ಮಾಡುತ್ತಾ ಸಿಗಬೇಕಾದ ನ್ಯಾಯಕ್ಕೆ ಬೇಡಿಕೆ ಇಟ್ಟಿದ್ದಾರೆ. ತಮ್ಮ ಪ್ರತಿಭಟನೆಯನ್ನು ಶಾಂತ ರೀತಿಯಿಂದ ಮಾಡುತ್ತಿದ್ದಾರೆ. ಜೊತೆಗೆ ರಕ್ತದಾನ, ನೇತ್ರದಾನದಂತಹ ಅಮೂಲ್ಯ ಸೇವೆಯನ್ನೂ ಸಹ ಮಾಡುತ್ತಿದ್ದಾರೆ. ಕೋವಿಡ್ ವಾರಿಯರ್ಸ್ ಆಗಿ ಚೈನಾ ವಿರುದ್ಧ ತೊಡೆ ತಟ್ಟಿರುವ ನಮ್ಮ ಭಾರತ ಸೈನ್ಯದ ವಾರಿಯರ್ಸ್‌ಗೆ ಮನೋ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪ್ರಬುದ್ಧತೆಯಿಂದ ಪ್ರತಿಭಟನೆ ಮಾಡುತ್ತಿರುವ ಈ ಕಿರಿಯ ವೈದ್ಯರ ಬಗ್ಗೆ ಸಾರ್ವಜನಿಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ. ಇಲ್ಲಿಯವರೆಗೂ ಇವರನ್ನು ಭೇಟಿ ಯಾಗಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಇವ ರಿಗೆ ಮೌಖಿಕವಾಗಿ ಭರವಸೆ ನೀಡುತ್ತಿದ್ದಾರೆಯೇ ಹೊರತು ಲಿಖಿತ ಭರವಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. 

ಹಾಸ್ಯಾಸ್ಪದ ವಿಷಯವೆಂದರೆ ನ್ಯಾಯ ಕೇಳುತ್ತಿ ರುವ ಇವರಿಗೆ ಹೆದರಿಸುವ ಪ್ರಯತ್ನ ನಡೆದಿದೆ. ಅಧಿಕಾರಿಗಳು ಇವರ ಮೇಲೆ ಕ್ರಮ ಕೈಗೊಳ್ಳುವ ಸುತ್ತೋಲೆ ಹೊರಡಿಸಿದ್ದಾರೆ. ಇದೇ ಅಧಿಕಾರಿಗಳು ಸರ್ಕಾರಕ್ಕೆ ಈ ಕಿರಿಯ ವೈದ್ಯರಿಗೆ ನ್ಯಾಯ ಸಿಗಬೇಕಿದೆ ಎಂದು ಯಾಕೆ ಪತ್ರ ಬರೆಯಬಾರದು? ಎಂದು ಪ್ರಶ್ನಿಸುತ್ತಾರೆ ಆಸ್ಪತ್ರೆಯ ಆಯಾ.

ಅಲ್ಲಾ ಸ್ವಾಮಿ ನಮ್ಮಂತಹ ಹೆಚ್ಚು ಓದಿರದ ಹೆಣ್ಣುಮಗಳಿಗೆ ಇದು ಅರ್ಥ ಆಗುತ್ತೆ, ಇವರಿಗೆ ಆಗಕಿಲ್ವಾ? ಇದಕ್ಕೆ ಎದೆಗಾರಿಕೆ ಬೇಕು. ಶ್ರೀಮಂತರಿಗೆ, ಸಚಿವರಿಗೆ ಬರೀ ಸಲಾಂ ಹೊಡೆಯುವ ಇಂತಹವರಿಂದ ಈ ವಿದ್ಯಾರ್ಥಿಗಳಿಗೆ ನ್ಯಾಯ ಸಿಗ್ತದಾ? ಎಂದು ಪ್ರಶ್ನಿಸಿದಾಗ ನಮ್ಮ ತಂಡವೇ ತಬ್ಬಿಬ್ಬುಗೊಂಡಿತು. 

ಇನ್ನೋರ್ವ ಹಿರಿಯರು ಹೇಳಿದ್ದು ಹೀಗೆ. ಈ ಕೊರೊನಾ ಸಂದರ್ಭದಲ್ಲಿ ನಮ್ಮ ಎಲ್ಲಾ ಮುಖಂಡರು, ಅಧಿಕಾರಿಗಳು ಬೂಟಾಟಿಕೆಗೆ ಈ ವೈದ್ಯರ ಮೇಲೆ ಹೂಮಳೆ ಸುರಿಸೋದು, ಕೊರೊನಾ ಮುಕ್ತರ ಜೊತೆಗೆ ಫೋಟೋ ತೆಗೆಸಿಕೊಂಡು ತಾವೇ ಘನಂಧಾರಿ ಕೆಲಸ ಮಾಡಿರೋದು ಅಂತಾ ಮಾಧ್ಯಮದಲ್ಲಿ ಮಿಂಚೋದನ್ನಷ್ಟೇ ಮಾಡ್ತಾ ಇದಾರೆ. ಇವರೆಲ್ಲಾ ಕೇವಲ ಫೋಟೋ ವೀರರು. ನಿಜವಾದ ಕೊರೊನಾ ಯೋಧರನ್ನು ಮರೆ ಮಾಚುತ್ತಿದ್ದಾರೆ. ಈ ಕಿರಿಯ ವೈದ್ಯರಿಗೆ ಕೊಡಬೇಕಾದ ಶಿಷ್ಯ ವೇತನಕ್ಕೆ, ನ್ಯಾಯಕ್ಕೆ ಸರ್ಕಾರ ಮತ್ತು ಸಂಬಂಧಪಟ್ಟವರು ತೋರಿಸುತ್ತಿರುವ ಅಸಡ್ಡೆ ಪ್ರತಿಯೊಬ್ಬ ಪ್ರಗತಿಪರ ಪ್ರಜೆಗಳು ತಲೆ ತಗ್ಗಿಸುವ ನಾಚಿಕೆಗೇಡಿತನದ ವಿಷಯವಾಗಿದೆ ಎಂಬುದು ನಗರದ ಪ್ರಬುದ್ಧ ವೈದ್ಯರ, ಚಿಂತಕರ, ಸಾಮಾಜಿಕ ಸಂಘಟನೆಗಳ ಒಟ್ಟು ಅಭಿಪ್ರಾಯವಾಗಿದೆ. 

ಸರ್ಕಾರ ಮತ್ತು ಜನಪ್ರತಿನಿಧಿಗಳು ನ್ಯಾಯ ಕೇಳು ತ್ತಿರುವವರ ಸಂಖ್ಯೆ ಕೇವಲ ನೂರಾಇಪ್ಪತು ಎಂದು ಹಗುರವಾಗಿ ಪರಿಗಣಿಸಿದೆ. ಬಹುತೇಕ ಎಲ್ಲಾ ವೃತ್ತಿ ಪರರು, ಚಿಂತಕರು, ವೈದ್ಯರು, ಇಂಜಿನಿಯರ್‌ಗಳು, ಪ್ರಗತಿಪರ ಸಾಮಾಜಿಕ ಸಂಘಟನೆಗಳು ಈ ನ್ಯಾಯ ಯುತ ಹೋರಾಟಕ್ಕೆ ಸಹಾನುಭೂತಿ ತೋರಿಸುತ್ತಿರು ವುದನ್ನು ನೋಡಿದರೆ, ಇವರಿಗೆ 120 x 120 ಬೆಂಬಲ ಸಿಗುವ ಮುನ್ಸೂಚನೆ ಕಂಡು ಬರುತ್ತಿದೆ! ಪರಿಸ್ಥಿತಿ ಕ್ಲಿಷ್ಟಕರವಾಗುವ ಮುನ್ನ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾಗಿದೆ. ಈಗ ಬೇಕಾಗಿರುವುದು ಕಾನೂನು ಕ್ರಮವಲ್ಲ, ಮಾನವೀಯ ಕ್ರಮ. ಈ ವೈದ್ಯರಿಗೆ ನ್ಯಾಯ ಸಿಗಬೇಕಿದೆ.

ಪ್ರಬುದ್ಧ ಪ್ರತಿಭಟನೆಗೆ ಸಿಗಬೇಕಿದೆ ನ್ಯಾಯ...! - Janathavani ಅರುಣ್‌ಕುಮಾರ್  ಆರ್.ಟಿ.
9663793337
[email protected]

error: Content is protected !!