ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಶಾಲೆಯ ಅಭಿವೃದ್ಧಿ ಬಗ್ಗೆಯೂ ಕಾಳಜಿ ವಹಿಸಬೇಕು

ಹರಿಹರ, ಅ.11- ಬೆಲ್, ಬಿಲ್ ಅದೇ ನಮ್ಮ ವಿಲ್ ಎಂಬುದಾಗಿ ಶಿಕ್ಷಕರು ತಮ್ಮ ಕಾರ್ಯವನ್ನು ನಿಭಾಯಿಸುವ ಪ್ರವೃತ್ತಿಯನ್ನು ಹೊಂದದೆ ತಾವು ಕಾರ್ಯ ನಿರ್ವಹಿಸುವ ಶಾಲೆ ಬಗ್ಗೆ ಕಾಳಜಿಯನ್ನು ತೋರಿಸುವ ಪ್ರವೃತ್ತಿಯನ್ನು ಹೊಂದಿದರೆ ಶಾಲೆ ಪ್ರಗತಿ ಹೊಂದುತ್ತದೆ. ಅದು ತಮಗೂ ಸಹ ಗೌರವವನ್ನು ತರುತ್ತದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ ಅಭಿಪ್ರಾಯ ಪಟ್ಟರು.

ನಗರದ ಆಶ್ರಯ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಟೆಕ್ಸಾಸ್ ಇನ್ ಸ್ಟ್ರುಮೆಂಟ್ಸ್ ಹಾಗೂ ಯೂತ್ ಫಾರ್ ಸೇವಾ ವತಿಯಿಂದ ದಿನಸಿ ಪದಾರ್ಥಗಳ ಕಿಟ್ ವಿತರಣೆ ಮಾಡಿ ಮಾತನಾಡಿದರು. 

ಶಿಕ್ಷಕರು ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಜೊತೆಯಲ್ಲಿ ಶಾಲೆಗೆ ಬೇಕಾದ ಅಗತ್ಯ ವಸ್ತುಗಳ ಬಗ್ಗೆ ಕೂಡ ಹೆಚ್ಚಿನ ಗಮನ ನೀಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು ಎಂದು ಅವರು ಕರೆ ನೀಡಿದರು.

ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್  ಮಲ್ಲಿಕಾರ್ಜುನ್ ದಾವಣಗೆರೆ ಮಾತನಾಡಿ, ರಾಜ್ಯದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯು ಪ್ರತಿವರ್ಷವೂ ಸಹ ಪುಸ್ತಕ, ಬ್ಯಾಗ್, ಕ್ರೀಡಾ ಸಾಮಗ್ರಿಗಳನ್ನು ನೀಡುತ್ತಾ ಬಂದಿರುತ್ತದೆ. ಈ ಬಾರಿ ಕೊರೊನಾದ  ಹಿನ್ನೆಲೆಯಲ್ಲಿ ವಿದ್ಯಾರ್ಥಿ ಗಳಿಗೆ ಪೌಷ್ಠಿಕ ಆಹಾರದ ಅವಶ್ಯಕತೆ ಇರುವು ದರಿಂದ ದಿನಸಿ ಪದಾರ್ಥಗಳನ್ನು ನೀಡಲಾಗು ತ್ತದೆ. ರಾಜ್ಯದ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಅದರಲ್ಲಿ ಹರಿಹರ ತಾಲ್ಲೂಕಿನ ಗಾಂಧಿ ಮೈದಾನ ಸರ್ಕಾರಿ ಶಾಲೆ, ಆಶ್ರಯ ಕಾಲೋನಿ ಸರ್ಕಾರಿ ಪ್ರಾಥಮಿಕ ಶಾಲೆ, ಉಕ್ಕಡಗಾತ್ರಿ ಶಾಲೆ ಮತ್ತು ಎಳೆಹೊಳೆ ಶಾಲೆ ಸೇರಿ ಒಟ್ಟು 344 ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಕಿಟ್ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.

ಬಿ.ಇ.ಓ ಬಸವರಾಜಪ್ಪ ಮಾತನಾಡಿ, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಸಂಸ್ಥೆಯ ಸಾಮಾಜಿಕ ಸೇವೆಯನ್ನು ಶ್ಲ್ಯಾಘಿಸಿದರು.

ಧೂಳೆಹೊಳೆ ಶಾಲೆಯ ಮುಖ್ಯ ಶಿಕ್ಷಕ ಶರಣ್ ಕುಮಾರ್ ಹೆಗಡೆ ಮಾತನಾಡಿ, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ವತಿಯಿಂದ ಹರಿಹರ ತಾಲ್ಲೂಕಿನ 10 ಶಾಲೆಗಳ ಹೆಸರನ್ನು ಕಳಿಸಿಕೊಡಲಾಗಿತ್ತು. ಅವರು ತಾಲ್ಲೂಕಿನ 4 ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಆಹಾರದ ಕಿಟ್ ನೀಡಿದ್ದಾರೆ ಎಂದು ಹೇಳಿದರು.

`ಜನತಾವಾಣಿ’ ವರದಿಗಾರ ಎಂ. ಚಿದಾ ನಂದ ಕಂಚಿಕೇರಿ ಮಾತನಾಡಿ, ವಿದ್ಯಾರ್ಥಿ ಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಏಕಾಗ್ರತೆ, ಉತ್ತಮ ಗುರಿಯನ್ನು ಹೊಂದಿದರೆ ತಾವು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಟೆಕ್ಸಾಸ್ ಇನ್‌ಸ್ಟ್ರು ಮೆಂಟ್ಸ್  ಸಂಸ್ಥೆಯ ಗಣೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ರೇಣುಕಮ್ಮ, ಶಿಕ್ಷಕ ವೀರಪ್ಪ, ರಾಜಪ್ಪ, ನೀಲಮ್ಮ, ಅನಸೂಯ, ಪೂರ್ಣಿಮಾ, ತಿಪ್ಪೇಸ್ವಾಮಿ, ಶಿವು ಇತರರು ಹಾಜರಿದ್ದರು.

error: Content is protected !!