ದಾವಣಗೆರೆ, ಅ.9- ಹಳೇ ಪ್ರವಾಸಿ ಮಂದಿರದಲ್ಲಿ ಚಿರತೆ ಪ್ರತ್ಯಕ್ಷವಾಗಿ ಪ್ರವಾಸಿಗರು ಮತ್ತು ಸ್ಥಳೀಯರನ್ನು ಬೆಚ್ಚಿ ಬೀಳಿಸಿದ ಘಟನೆ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯಲ್ಲಿ ಇಂದು ನಡೆದಿದೆ.
ಬಳಕೆಯಾಗದೇ ಪಾಳು ಬಿದ್ದಂತಿದ್ದ ಹಳೆ ಪ್ರವಾಸಿ ಮಂದಿರದ ಒಳಗೆ ಯಾವಾಗಲೋ ಚಿರತೆ ಬಂದು ಅವಿತುಕೊಂಡಿದೆ. ಈ ವೇಳೆ ಪ್ರವಾಸಿಗರು ನೆರಳಿಗೆಂದು ಪ್ರವಾಸಿ ಮಂದಿರದತ್ತ ತೆರಳುತ್ತಿದ್ದಂತೆ ಪ್ರವಾಸಿ ಮಂದಿರದ ಒಳಗಿನಿಂದ ಚಿರತೆ ಗುರುಗಟ್ಟುವ ಸದ್ದು ಕೇಳಿಸಿದೆ. ಇದರಿಂದ ಬೆಚ್ಚಿ ಬಿದ್ದ ಪ್ರವಾಸಿಗರು ತಕ್ಷಣ ಎಚ್ಚೆತ್ತುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ದೌಡಾಯಿಸಿ, ಚಿರತೆ ಹಿಮ್ಮೆಟ್ಟಿಸಲು ಮುಂದಾಗಿದ್ದಾರೆ. ಕಿಟಕಿಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿದ್ದರಿಂದ ಪಟಾಕಿ ಶಬ್ಧಕ್ಕೆ ಹೆದರಿದ ಚಿರತೆಯು ಪ್ರವಾಸಿ ಮಂದಿರದ ಮುಂಬಾಗಿಲಿಂದ ಹಾರಿ ಗುಡ್ಡದ ಕಡೆಗೆ ಓಡಿದೆ. ಇದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆರ್ಎಫ್ಒ ಮಾವಿನ ಹೊಳೆಯಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಯಾವುದೇ ಜೀವ ಹಾನಿಯಾಗದೇ ಚಿರತೆಯನ್ನು ಮರಳಿ ಕಾಡಿಗೆ ಕಳುಹಿಸಲಾಯಿತು.
ಚಿರತೆ ಪ್ರತ್ಯಕ್ಷ ಸುದ್ದಿ ತಿಳಿದು ನೂರಾರು ಜನರು ಜಮಾವಣೆಗೊಂಡು ಚಿರತೆ ನೋಡಲು ನೂಕು ನುಗ್ಗಲುಂಟಾಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.