8 ರಸ್ತೆಗಳನ್ನು ಸಂಪರ್ಕಿಸುವ ಶಾಮನೂರು ರಸ್ತೆಯಲ್ಲಿ ಬೃಹತ್ ಮತ್ತು ಸುಂದರ ವೃತ್ತ ನಿರ್ಮಾಣಕ್ಕೆ ಮನವಿ

ದಾವಣಗೆರೆ, ಜು. 5 – ನಗರದ ಸೌಂದರ್ಯೀಕರಣದಲ್ಲಿ ವೃತ್ತವೂ ಪ್ರಮುಖ ಪಾತ್ರ ವಹಿಸಲಿದ್ದು, ಈ ಹಿನ್ನೆಲೆಯಲ್ಲಿ ಶಾಮನೂರು ರಸ್ತೆಯಲ್ಲಿ ಕೂಗಳತೆಗಳಲ್ಲಿರುವ ಎಂಟು ರಸ್ತೆಗಳನ್ನೊಳಗೊಂಡಂತೆ ಬೃಹತ್ ಮತ್ತು ಸುಂದರವಾದ ವೃತ್ತ (ಸರ್ಕಲ್) ವನ್ನು ನಿರ್ಮಿಸುವ ಅಗತ್ಯತೆ ಇದೆ.

ಕಾಸಲ್ ಶ್ರೀನಿವಾಸ ಶ್ರೇಷ್ಠಿ ಉದ್ಯಾನ (ನೀರಿನ ಟ್ಯಾಂಕ್) ವನಕ್ಕೆ ಹೊಂದಿಕೊಂಡಂ ತಿರುವ 8 ರಸ್ತೆಗಳಿಗೆ ಸಂಪರ್ಕ ಕಲ್ಪಿಸುವಂತಹ ಬೃಹತ್ ವೃತ್ತವನ್ನು ನಿರ್ಮಿಸಿದ್ದಲ್ಲಿ ನಗರದ ಸೌಂದ ರ್ಯೀಕರಣದ ಜೊತೆಗೆ, ದಾವಣಗೆರೆಗೆ ಉತ್ತಮ ಹೆಸರು ಬರುವುದರಲ್ಲಿ ಸಂದೇಹವೇ ಇಲ್ಲ.

ಈ ಕುರಿತಂತೆ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರೂ ಆದ ಮೋತಿ ಸೈಕಲ್ ಮಾರ್ಟ್ ಮಾಲೀಕ ಟಿ.ಶಂಕ್ರಪ್ಪ ಅವರು, ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ಅವರಿಗೆ ಲಿಖಿತ ಮೂಲಕ ಮನವಿ ಪತ್ರ ಸಲ್ಲಿಸಿದ್ದಾರೆ.

ತಮ್ಮ ನಿವಾಸದಲ್ಲಿ ಇಂದು ಏರ್ಪಡಿಸಿದ್ದ ಸ್ನೇಹ ಬಳಗದ ಸೌಹಾರ್ದ ಕೂಟದಲ್ಲಿ ಮಾತನಾಡಿದ ಅವರು, ಶಾಮನೂರು ರಸ್ತೆಯು ನಗರದ ಪ್ರಮುಖ ಮತ್ತು ಪ್ರತಿಷ್ಠಿತ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದಲ್ಲಿ ನಗರಕ್ಕೆ ಮತ್ತಷ್ಟು ಮೆರಗು ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ರಸ್ತೆಯೊಂದರಲ್ಲೇ ಸರ್ ಎಂ. ವಿಶ್ವೇಶ್ವರಯ್ಯ ಉದ್ಯಾನವನ ಸೇರಿದಂತೆ ಏಳೆಂಟು ಉದ್ಯಾನವನಗಳು, ರಾಜ್ಯದಲ್ಲೇ ಹೆಸರಾಂತ ಎನ್ನಬಹುದಾದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಹೆಸರಾಂತ ನೇತ್ರ ತಜ್ಞರಾಗಿದ್ದ ದಿ. ಡಾ. ಎಂ.ಸಿ. ಮೋದಿ ಹೆಸರಿನ ವೃತ್ತ ಇದ್ದು, ಕಾರಣ, ಈ ರಸ್ತೆಯ ಅಭಿವೃದ್ಧಿ ಅವಶ್ಯಕವಾಗಿದೆ ಎಂದು ಶಂಕ್ರಪ್ಪ ಕಳಕಳಿ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ 41 ವಾರ್ಡುಗಳಿದ್ದವು. ಇದೀಗ ವಾರ್ಡುಗಳ ಸಂಖ್ಯೆ 45ಕ್ಕೆ ಏರಿದೆ. ಹಳೇ ವಾರ್ಡುಗಳಲ್ಲಿದ್ದ ವಾರ್ಡ್ ಸಂಖ್ಯೆ, ತಿರುವು, ವಾರ್ಡ್ ಸದಸ್ಯರ ಹೆಸರು, ಶಾಸಕರ ಹೆಸರುಗಳ ವಿವರಗಳಿರುವ ನಾಮಫಲಕಗಳೇ ಇಂದೂ ಮುಂದುವರೆದಿವೆ. ಹೊಸ ನಾಮಫಲಕಗಳನ್ನು ಅಳವಡಿಸುವುದರ ಮೂಲಕ ಊರಿನ ಘನತೆಗೆ ತಕ್ಕಂತೆ ಅಂದ – ಚೆಂದವನ್ನಾಗಿ ಮಾಡುವಂತೆ ಅವರು ಸಲಹೆ ನೀಡಿದ್ದಾರೆ.

ನಗರದ ಎಲ್ಲಾ 45 ವಾರ್ಡುಗಳಲ್ಲಿನ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ನಗರದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಜನಸಂಖ್ಯೆಗನುಗುಣವಾಗಿ ಕಾಲೋನಿ ಮತ್ತು ಬಡಾವಣೆಗಳಲ್ಲಿನ ಒಳ ಚರಂಡಿ ಹಾಗೂ ಮುಚ್ಚಳಗಳನ್ನು ಬದಲಾಯಿಸುತ್ತಿಲ್ಲ. ರಸ್ತೆಗಳನ್ನು ಅಗಲೀಕರಣ ಮಾಡುತ್ತಿಲ್ಲ. ಹಿಂದೆ ಇದ್ದ ಒಳಚರಂಡಿಗಳ 6 ಇಂಚು ಪೈಪುಗಳನ್ನೇ ಮುಂದುವರೆಸಲಾಗುತ್ತಿದೆ. ಇದರಿಂದ ಒಳ ಚರಂಡಿಗಳ ನೀರು ಮತ್ತು ತ್ಯಾಜ್ಯಗಳ ರಭಸಕ್ಕೆ ಪೈಪುಗಳು ಒಡೆದು ಸಾಂಕ್ರಾಮಿಕ ರೋಗಾಣುಗಳಿಗೆ ಅವಕಾಶ ನೀಡಿದಂತಾಗುತ್ತಿದೆ. ಕಾರಣ, ದೊಡ್ಡ ಮತ್ತು ಗುಣಮಟ್ಟದ ಪೈಪುಗಳನ್ನು ಅಳವಡಿಸುವ ಕಾರ್ಯ ಶೀಘ್ರ ಗತಿಯಲ್ಲಿ ಆಗಬೇಕಿದೆ.

ಅಲ್ಲದೇ, ಬಹುತೇಕ ವಾರ್ಡುಗಳಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಪಡಿಸಬೇಕಿದೆ. ಅಪಾಯದ ಹಂತದಲ್ಲಿರುವ ವಿದ್ಯುಚ್ಛಕ್ತಿ ಕಂಬಗಳನ್ನು ಬದಲಾಯಿಸಬೇಕಿದೆ. ಬೇಸಿಗೆ ಕಾಲ ಇರುವುದರಿಂದ ಸಾರ್ವಜನಿಕರಿಗೆ ಕುಡಿ ಯುವ ನೀರಿನ ಸರಬರಾಜು ಮಾಡಲು ಒತ್ತು ನೀಡಬೇಕು. ಸೊಳ್ಳೆಗಳನ್ನು ನಿಯಂತ್ರಿಸುವಲ್ಲಿ ಔಷಧಿಗಳನ್ನು ಸಿಂಪಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಅವರು ಮೇಯರ್ ಅಜಯ್ ಕುಮಾರ್ ಅವರನ್ನು ಕೇಳಿಕೊಂಡಿದ್ದಾರೆ.

ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಾಗ ನಮ್ಮ ನಂತರವೂ ನಮ್ಮ ಹೆಸರು ನಿರಂತರವಾಗಿ ಉಳಿಸಲು ಶಾಶ್ವತ ಯೋಜನೆಗಳಿಂದ ಮಾತ್ರ ಸಾಧ್ಯ. ಈ ಕಾರಣದಿಂದಾಗಿ ಜನಪ್ರತಿನಿಧಿಗಳು ಪಕ್ಷ – ಭೇದ ಮರೆತು ಶಾಶ್ವತವಾಗಿರುವಂತಹ ಕೆಲಸ ಮಾಡಲು ಮುಂದಾಗಬೇಕು ಎಂದು ಶಂಕ್ರಪ್ಪ ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಗೀತಾ ದಿಳ್ಳೆಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ರಾ.ಲ. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಸೋಮಶೇಖರ್, ತ್ರಿಶೂಲ್ ಕಲಾಭವನದ ಪಾಲುದಾರರಾದ ಕಂದನಕೋವಿ ಪ್ರಕಾಶ್, ಕಂದನಕೋವಿ ತಿಪ್ಪೇಶ್, ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ. ಜಯಕುಮಾರ್, ಉಪಾಧ್ಯಕ್ಷ ಎಸ್. ಓಂಕಾರಪ್ಪ, ನಿರ್ದೇಶಕರುಗಳಾದ ಎಂ.ಎಸ್. ಶಿವಯೋಗಿ, ಹೆಚ್.ಪಿ. ಮಂಜುನಾಥ್,  ಹರಿಹರ ತಾಲ್ಲೂಕಿನ ಜೆಡಿಎಸ್ ಮುಖಂಡ ಬನ್ನಿಕೋಡು ಹನುಮನಗೌಡ್ರು, ಜೆಡಿಎಸ್ ಮುಖಂಡರುಗಳಾದ ಎಂ. ಈಶ್ವರಪ್ಪ, ಹಳ್ಳೂರು ಸೋಮಣ್ಣ, ಫ್ಲೆಕ್ಸ್ ಬಸವರಾಜ್, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವಿಶೇಷ ಆಹ್ವಾನಿತ ಬೆಳ್ಳೂಡಿ ಮಂಜುನಾಥ್, ಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಾಜಿ ನಿರ್ದೇಶಕ ಹೆಚ್.ಕೆ. ಶಂಕರನ್ ಮತ್ತಿತರರು ಸೌಹಾರ್ದ ಕೂಟದಲ್ಲಿ ಪಾಲ್ಗೊಂಡಿದ್ದರು.

ಟಿ.ಶಂಕ್ರಪ್ಪ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ, ಪುತ್ರ ಟಿ.ಎಸ್. ಬಕ್ಕೇಶ್ ಹಾಗೂ ಕುಟುಂಬ ವರ್ಗದವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಬೀಳ್ಕೊಟ್ಟರು.

error: Content is protected !!