ಜಗಳೂರು : ಫುಟ್ ಪಾತ್ ಕಾಮಗಾರಿ ಅವೈಜ್ಞಾನಿಕ

ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಆರೋಪ

ಜಗಳೂರು, ಜು.5- ಪಟ್ಟಣದ ದ್ವಿಮುಖ ರಸ್ತೆ ಎರಡೂ ಬದಿ ರಸ್ತೆ ಅಗಲೀಕರಣ ಮಾಡದೇ, ಚರಂಡಿ ವ್ಯವಸ್ಥೆ ಸುಗಮಗೊಳಿಸಿದೇ ಪಂಚಾಯಿತಿಯಿಂದ ಕೋಟಿ ರೂ. ವೆಚ್ಚದಲ್ಲಿ ಗ್ರಿಲ್‌ ಅಳವಡಿಸಿ, ಫುಟ್‌ಪಾತ್ ನಿರ್ಮಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಆರೋಪಿಸಿದರು.

ಪಟ್ಟಣದ ಗಾಂಧಿ ವೃತ್ತ ಹಾಗೂ ನಂದಿನಿ ಹೋಟೆಲ್‌ ಮುಂಭಾಗದ ದ್ವಿಮುಖ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಪ್ರಾರಂಭವಾಗಿರುವ ಕಾಮಗಾರಿ ವೀಕ್ಷಿಸಿ ಪತ್ರಕರ್ತರೂಂದಿಗೆ ಅವರು ಮಾತನಾಡಿದರು.

ಹಿಂದೆ ಸುಸಜ್ಜಿತವಾಗಿ ನಿರ್ಮಿಸಿದ್ದ, ಫುಟ್‌ಪಾತ್ ತೆರವುಗೊಳಿಸಿ, 3.4 ಕೋಟಿ ರೂ. ವೆಚ್ಚದಲ್ಲಿ ಪಟ್ಟಣ ಪಂಚಾಯಿತಿಯಿಂದ ನಿರ್ಮಿಸುತ್ತಿರುವ ಫುಟ್ ಪಾತ್ ಮೇಲಿನ ಗ್ರಿಲ್‌ ಅಳವಡಿಕೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಅಗಲೀಕರಣ ಮಾಡಿ ಪಕ್ಕದಲ್ಲಿರುವ ಚರಂಡಿಗಳನ್ನು ಸುಗಮಗೊಳಿಸಿ, ನಂತರ ಕಾಮಗಾರಿ ಮಾಡಬೇಕಿತ್ತು ಎಂದರು.

ಈ ಕಾಮಗಾರಿಯಿಂದ ರಸ್ತೆ ಕಿರಿದಾಗಿ ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊಂದರೆಯಾಗಲಿದೆ. ಅಲ್ಲದೇ, ಫುಟ್‌ಪಾತ್ ವ್ಯಾಪಾರಿಗಳು ಬೀದಿಗೆ ಬಿದ್ದು‌, ಸಂಕಷ್ಟ ಅನುಭವಿಸುವರು. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ. ಅಧಿಕಾರಿಗಳಿಗೆ ಸ್ಥಳೀಯವಾಗಿ ಮಾಹಿತಿ ಕೊರತೆ ಇದೆ. ಈ ಬಗ್ಗೆ ಮತ್ತೊಮ್ಮೆ ಚಿಂತನೆ ನಡೆಸಿ ನಿರ್ಧಾರ ಕೈಗೊಳ್ಳಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಮಾಜಿ ಶಾಸಕರು ತಿಳಿಸಿದರು.

ನಾನು ಯಾರ ಒತ್ತಡಕ್ಕೂ ಮಣಿದಿಲ್ಲ. ನನ್ನ ಅವಧಿಯಲ್ಲಿ ಚಳ್ಳಕೆರೆ ಗೇಟ್‌ನಿಂದ ಸಾರ್ವಜನಿಕ ಆಸ್ಪತ್ರೆವರೆಗೆ ರಸ್ತೆಯನ್ನು ಪಿಡಬ್ಲ್ಯೂಡಿ ಮಿತಿಯೊಳಗೆ ಅಭಿವೃದ್ಧಿ ಪಡಿಸಿರುವೆ. ಅಗಲೀಕರಣ ಮಾಡಿ, ಎರಡೂ ಬದಿಗೆ ರಸ್ತೆ ನಿರ್ಮಿಸಿದ್ದೆ. ಮುಂದುವರೆದು ಕೆಇಬಿ ಸರ್ಕಲ್‌ವರೆಗೆ  ಸಾಧ್ಯವಾಗಿಲ್ಲ‌. ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿದೆ. ಹಾಲಿ ಶಾಸಕ ಎಸ್.ವಿ.ರಾಮಚಂದ್ರ ರಸ್ತೆ ಅಗಲೀಕರಣಕ್ಕೆ‌ ಮುಂದಾಗಲಿ ನನ್ನ ಸಂಪೂರ್ಣ ಬೆಂಬಲವಿದೆ ಎಂದು, ಪತ್ರಕರ್ತರು ರಸ್ತೆ ಅಗಲೀಕರಣ‌ ನಿಮ್ಮ ಅವಧಿಯಲ್ಲಿ ಆಗಬೇಕಿತ್ತು. ಪ್ರಭಾವಿಗಳಿಗೆ ಮಣೆ ಹಾಕಿ ಸ್ಥಗಿತಗೊಳಿಸಿದ್ದಾರೆ ಎಂಬ ಆರೋಪವಿದೆ ಎಂದು ಪತ್ರಕರ್ತರ ಕೇಳಿದ ಪ್ರಶ್ನೆಗೆ ಮೇಲಿನಂತೆ ಅವರು ಉತ್ತರಿಸಿದರು.

ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ರಾಜು ಡಿ.ಬಣಕಾರ್  ಪಟ್ಟಣದ ವಿವಿಧೆಡೆ ಸಿಸಿ ರಸ್ತೆ, ಡಿವೈಡರ್, ಲೈಟ್, ಎರಡೂ ಬದಿಯಲ್ಲಿ ಫುಟ್ ಪಾತ್ ನಿರ್ಮಾಣ‌ದ‌ ಕಾಮಗಾರಿಗಳನ್ನು 3.4 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶಾಸಕರೂಂದಿಗೆ ಚರ್ಚಿಸಿ, ಸಲಹೆಯ ಮೇರೆಗೆ ಕಾಮಗಾರಿ ಅಂದಾಜು ಪಟ್ಟಿ ತಯಾರಿಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟ ಪಡಿಸಿದರು.

ಈ‌ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರವಿಕುಮಾರ್, ಶಕೀಲ್, ಕಾಂಗ್ರೆಸ್ ಮುಖಂಡರಾದ ಬಿ.ಲೋಕೇಶ್, ರೇವಣ್ಣ, ಪಿ. ಮಂಜುನಾಥ್, ಮರೇನಹಳ್ಳಿ ಶೇಖರಪ್ಪ, ನಿಬಗೂರು ಮಲ್ಲಿಕಾರ್ಜುನ್, ಸುರೇಶ್ ನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!