ರಕ್ತದಾನಿಗಳು ಜೀವ ಉಳಿಸುವ ರಕ್ಷಕರು : ಡಿಸಿ ಬೀಳಗಿ

ದಾವಣಗೆರೆ, ಜು.2 – ರಕ್ತದಾನಿಗಳು ಮತ್ತೊಬ್ಬರ ಪ್ರಾಣ ಉಳಿಸುವ ಜೀವರಕ್ಷಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರಕ್ತ ಭಂಡಾರ, ಜಿಲ್ಲಾ ಚಿಗಟೇರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ   ಕುವೆಂಪು ಕನ್ನಡ ಭವನದಲ್ಲಿ ನಿನ್ನೆ ಆಯೋಜಿಸಲಾಗಿದ್ದ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಉಪಯೋಗಿಸಬಹುದು. ಇದರಿಂದಾಗಿ ಹಲವಾರು ಜನರು ಸಾವಿನಿಂದ ಪಾರಾಗಬಹು ದಾಗಿದೆ. ಈ ಹಿನ್ನೆಲೆಯಲ್ಲಿ ರಕ್ತದಾನಿಗಳಿಗೆ ಹೃದಯ ಪೂರ್ವಕ ಧನ್ಯವಾದ ಅರ್ಪಿಸಬೇಕಿದೆ. ವಿಶ್ವ ರಕ್ತದಾನಿಗಳ ದಿನಾಚರಣೆಯ ಘೋಷವಾಕ್ಯವಾದ §ಸುರಕ್ಷಿತ ರಕ್ತ ಜೀವ ರಕ್ಷಕ – ರಕ್ತ ನೀಡಿ ಮತ್ತು ಪ್ರಪಂಚವನ್ನು ಆರೋಗ್ಯಕರ ಸ್ಥಳವನ್ನಾಗಿಸಿ¬ ಎಂಬುದಕ್ಕೆ ಎಲ್ಲರೂ ಬದ್ಧರಾಗುವ ಮೂಲಕ ಕಾರ್ಯ ಪ್ರವೃತ್ತರಾಗ ಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಇಲಾಖೆ ತಂಡ ರಕ್ತದಾನ ಕಾರ್ಯಕ್ರಮದಲ್ಲಿ ಬಹಳ ಕಳಕಳಿಯಿಂದ ಪಾಲ್ಗೊಂಡಿದ್ದಾರೆ. ಇವರೆಲ್ಲ ಸಮಾಜದ ಆಸ್ತಿ ಇದ್ದ ಹಾಗೆ. ಕೊರೊನಾ ಯುದ್ಧದಲ್ಲಿ ಇವರಿಂದಾಗಿ ಜಿಲ್ಲೆಗೆ ಒಳ್ಳೆಯ ಹೆಸರು ಬಂದಿದೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಸಿ.ಜಿ. ಆಸ್ಪತ್ರೆಯ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ. ಡಿ.ಹೆಚ್. ಗೀತಾ ಮಾತನಾಡಿ, ರಕ್ತದಲ್ಲಿನ ಕೆಂಪು ರಕ್ತ ಕಣ, ಬಿಳಿ ರಕ್ತ ಕಣ ಹಾಗೂ ಪ್ಲಾಸ್ಮಾಗಳನ್ನು ವಿಂಗಡಣೆ ಮಾಡಿ ಬೇರೆ ಬೇರೆ ರೋಗಗಳಿಗೆ ಬಳಸಲಾಗುತ್ತದೆ ಎಂದು ತಿಳಿಸಿದರು.

ತಲಸ್ಸೇಮಿಯಾ, ಸಿಕಲ್ ಸೆಲ್ ಅನಿಮಿಯಾದಂತಹ ಅನುವಂಶೀಯ ರೋಗದಿಂದ ಬಳಲುತ್ತಿರುವವರಿಗೆ ಕೆಂಪು ರಕ್ತ ಕಣಗಳು ನಿಯಮಿತವಾಗಿ ಬೇಕಾಗುತ್ತದೆ. ಡೆಂಗ್ಯೂ ರೀತಿಯ ರೋಗಗಳು ಬಂದಾಗ ಬಿಳಿ ರಕ್ತಕಣಗಳ ಅಗತ್ಯ ಬರುತ್ತದೆ. ಕಿಡ್ನಿಯಲ್ಲಿ ಸಮಸ್ಯೆ ಉಂಟಾದಾಗ ಪೋಷಕಾಂಶ ಕಡಿಮೆಯಾಗಿ ಪ್ಲಾಸ್ಮಾ ಚಿಕಿತ್ಸೆ ಬೇಕಾಗುತ್ತದೆ ಎಂದವರು ವಿವರಿಸಿದ್ದಾರೆ. ಹೀಗಾಗಿ ಒಳ್ಳೆಯ ಕಾರ್ಯ ಮಾಡಬೇಕು ಎನಿಸಿದಾಗ ರಕ್ತದಾನ ಮಾಡಿ. ಇದರಿಂದ ಮೂವರಿಗೆ ನೆರವು ನೀಡಿದಂತಾಗುತ್ತದೆ ಎಂದವರು ತಿಳಿಸಿದರು.

ಆರ್.ಸಿ.ಹೆಚ್. ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ, ಕೊರೊನಾ ಕಾರಣದಿಂದಾಗಿ ರಕ್ತದಾನ ಮಾಡಲು ಜನರು ಹಿಂಜರಿಯುತ್ತಿದ್ದಾರೆ. ಕೊರೊನಾ ಬಂದ ಮಾತ್ರಕ್ಕೆ ಉಳಿದ ರೋಗಗಳು ಮರೆಯಾಗಿಲ್ಲ. ಹೀಗಾಗಿ ರೋಗ ಹಾಗೂ ಅಪಘಾತಗಳಿಗೆ ಮತ್ತು ಗರ್ಭಿಣಿಯರಿಗೆ ರಕ್ತದಾನದ ಅಗತ್ಯವಿದೆ ಎಂದು ಹೇಳಿದರು.

ರಕ್ತದಾನ ಮಾಡಿದರೆ ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವ ಅಂಗಗಳು ಸಕ್ರಿಯವಾಗುತ್ತವೆ, ಇದು ಹೆಚ್ಚಿನ ಆರೋಗ್ಯ ತರುತ್ತದೆ. ಕೆಲವರಲ್ಲಿ ಕೆಂಪು ರಕ್ತ ಕಣಗಳು ಅತಿಯಾಗಿ ಸಮಸ್ಯೆ ಎದುರಾಗುತ್ತದೆ. ಅವರಿಗಂತೂ ರಕ್ತದಾನ ಮತ್ತಷ್ಟು ಉಪಯುಕ್ತ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಂಜುನಾಥ್ ಕುರ್ಕಿ ಮಾತನಾಡಿ, ರಕ್ತದಾನ ಬಹಳ ಶ್ರೇಷ್ಠವಾದ ದಾನವಾಗಿದ್ದು, ಒಂದು ಜೀವ ಉಳಿಸುವ ಶಕ್ತಿ ರಕ್ತದಾನಕ್ಕೆ ಇದ್ದು, ಇನ್ನೊಬ್ಬರ ಬದುಕು ಬೆಳಗಿಸಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರ ಸ್ವಾಮಿ, ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕ ಡಾ.ನಾಗರಾಜ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅಧೀಕ್ಷಕ ಡಾ.ಜೆ.ಬಿ.ನೀಲಕಂಠ, ಜಿಲ್ಲಾ ಏಡ್ಸ್ ಪ್ರಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಕೆ.ಎಚ್.ನಾಗರಾಜ್, ಡಾ.ಮುರುಳೀಧರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!