ಧರ್ಮವನ್ನು ಅನುಸರಿಸಿದಾಗ ಮಾತ್ರ ಮುಕ್ತಿ ಕಾಣಲು ಸಾಧ್ಯ : ಸಾಧ್ವಿ ಶ್ರೀ ಶೀಲಧರ್ಮಶ್ರೀಜಿ
ಚಿತ್ರದುರ್ಗ, ಜು.1- ಮುಕ್ತಿ ಮಾರ್ಗವನ್ನು ಪಡೆಯಲು ಧರ್ಮದ ಅಗತ್ಯತೆ ಇದೆ ಎಂದು ಪೂಜ್ಯ ಸಾಧ್ವಿ ಶ್ರೀ ಶೀಲಧರ್ಮ ಶ್ರೀಜಿ ಪ್ರತಿಪಾದಿಸಿದರು.
ನಗರದ ಆದರ್ಶ ನಗರದ ಶ್ರೀ ಆದಿಕೀರ್ತೀಶ್ವರ ದೇವಾಲಯದಲ್ಲಿ ಹಾರ್ದಿಕ್ ಮೆಹ್ತಾ ಅವರು ನಾಳೆ ದಿನಾಂಕ 2 ರಂದು ಜೈನ ಮುನಿಯಾಗಿ ಸನ್ಯಾಸತ್ವ ಸ್ವೀಕರಿಸುವ ಸಮಾರಂಭದ ಅಂಗವಾಗಿ ಇಂದು ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಇಂದಿನ ದಿನಮಾನಗಳಲ್ಲಿ ಧರ್ಮವನ್ನು ಅಷ್ಟಾಗಿ ಯಾರೂ ಸಹಾ ಸರಿಯಾದ ರೀತಿಯಲ್ಲಿ ಪಾಲನೆ ಮಾಡುತ್ತಿಲ್ಲ. ಇಂದಿನ ಯುವ ಜನಾಂಗ ಧರ್ಮ ಎಂದರೆ ಆಸಕ್ತಿಯನ್ನು ವಹಿಸುತ್ತಿಲ್ಲ. ಇಂತಹ ಸಮಯದಲ್ಲಿ ಹಾರ್ದಿಕ್ ಮೆಹ್ತಾ, ಸುಖ ಜೀವನದ ಸಂಸಾರವನ್ನು ತ್ಯಾಗ ಮಾಡುವುದರ ಮೂಲಕ ಭಗವಾನ್ ಮಹಾವೀರನ ಅನುಯಾಯಿಯಾಗಿ ಇರಲು ಸನ್ಯಾಸವನ್ನು ಸ್ವೀಕಾರ ಮಾಡುತ್ತಿರುವು ದು ಸಹ ಉತ್ತಮವಾದ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ದಿನಮಾನದಲ್ಲಿ ಶಾಂತಿ, ನೆಮ್ಮದಿ, ಮುಕ್ತಿಗಾಗಿ ಎಲ್ಲೆಲ್ಲೋ ಅಲೆದಾಡು ತ್ತಿದ್ದಾರೆ. ಆದರೆ, ಜೀವನದಲ್ಲಿ ಧರ್ಮವನ್ನು ಅನುಸರಿಸಿ ದಾಗ ಮಾತ್ರ ಮುಕ್ತಿಯನ್ನು ಕಾಣಲು ಸಾಧ್ಯವಿದೆ. ಇದನ್ನು ಯಾರೂ ಸಹಾ ಅರಿತಿಲ್ಲ. ಸಾಮಾನ್ಯ ಜನತೆಯೂ ಸಹಾ ಭಗವಂತ ನೀಡಿದ ತತ್ವ ಹಾಗೂ ನಾಮ ಸ್ಮರಣೆಯನ್ನು ಮಾಡುವುದಲ್ಲದೆ, ತಮ್ಮ ದುಡಿಮೆಯಲ್ಲಿ ಒಂದು ಭಾಗವನ್ನು ದಾನ ಮಾಡುವುದರ ಮೂಲಕ ದೀನ ದಲಿತರ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜನಪ್ರಿಯ ಟೆಕ್ಸ್ಟೈಲ್ನ ಗುಮಾನ್ಮಲ್ ಗವಾಡಿ ಜೈನ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಿಂದ ಇದುವರೆಗೂ 9 ಜನ ಹೆಣ್ಣು ಮಕ್ಕಳು ಜೈನ ಮುನಿ ಗಳಾಗಿದ್ದಾರೆ. ಇದೇ ಪ್ರಥಮವಾಗಿ ಹಾರ್ದಿಕ್ ಮೆಹ್ತಾ ಸನ್ಯಾಸತ್ವವನ್ನು ಸ್ವೀಕಾರ ಮಾಡುತ್ತಿದ್ದಾರೆ. ಸುಖಕರವಾದ ಸಂಸಾರ ಜೀವನವನ್ನು ತ್ಯಾಗ ಮಾಡುವುದರ ಮೂಲಕ ಜೈನ ಮುನಿಯಾಗಿ ಸಮುದಾಯದ ಎಲ್ಲರಿಗೂ ಮಾರ್ಗದರ್ಶಕರಾಗುತ್ತಿರುವುದು ಸಂತೋಷವನ್ನು ಉಂಟು ಮಾಡಿದೆ ಎಂದು ಹೇಳಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಾರ್ಯಕ್ರಮಕ್ಕೆ ಆಗಮಿಸಿ ಜೈನ ಮುನಿಯಾಗುತ್ತಿರುವ ಹಾರ್ದಿಕ್ ಮೆಹತಾ ಅವರಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಶ್ರೀ ಕೀರ್ತಿ ಯಶ ಶ್ರೀಜಿ, ನಗರಸಭೆ ಮಾಜಿ ಸದಸ್ಯೆ ಶ್ರೀಮತಿ ಶ್ಯಾಮಲ ಹಾರ್ದಿಕ ಮೆಹತಾ ಅವರ ತಂದೆ ತಾರಾಚಂದ್ ಜೀ ಮೆಹತಾ, ತಾಯಿ ಶ್ರೀಮತಿ ಮಮತಾದೇವಿ ಜೈನ್, ಟ್ರಸ್ಟಿಗಳಾದ ಪೃಥ್ವಿರಾಜ್ ಜೈನ್, ಪ್ರೇಮಚಂದ ಜೈನ್, ಮುಖಂಡರಾದ ಹತ್ತಿಮಲ್ಜೀ, ಜಯಂತಿ ಲಾಲ್ ಚೋಪ್ರ ಸೇರಿದಂತೆ ಇತರರು ಭಾಗವಹಿಸಿದ್ದರು.
ಇಂದು ಬೆಂಗಳೂರಿನ ದೇವನಹಳ್ಳಿ ಸಿದ್ಧಾಚಲ ಸ್ಥೂಲಭದ್ರ ಧಾಮ ಸಿದ್ಧಕ್ಷೇತ್ರದಲ್ಲಿ ಜೈನ ಮುನಿಗಳಾದ ಶ್ರೀ ಚಂದ್ರಯೇಶ್ ಗುರೂಜೀ ಸಾನ್ನಿಧ್ಯದಲ್ಲಿ ಭಗವಾನ್ ಮಹಾವೀರರ ಅನುಯಾಯಿಯಾಗಿ ಜೈನ ದೀಕ್ಷೆಯನ್ನು ಪಡೆಯಲಿದ್ದಾರೆ.