ಮಲೇಬೆನ್ನೂರು : ಕೊರೊನಾ ವಾರಿಯರ್ಸ್ ಸನ್ಮಾನ ಸಮಾರಂಭದಲ್ಲಿ ನಂದಿಗುಡಿ ಶ್ರೀಗಳು ಬೇಸರ
ಮಲೇಬೆನ್ನೂರು, ಜೂ.30- ಕೊರೊನಾ ವೈರಸ್ ಬಗ್ಗೆ ಜನ ಇನ್ನೂ ಜಾಗೃತರಾಗಿಲ್ಲ. ಜನರು ಭಯಪಡುವುದರ ಬದಲಾಗಿ ಜಾಗೃತರಾಗಬೇ ಕೆಂದು ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಅಪೂರ್ವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ 3ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಏರ್ಪಾಡಾಗಿದ್ದ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಹಾಗೂ ಪೌರ ಕಾರ್ಮಿಕರಿಗೆ ಹೆಲ್ತ್ ಕಿಟ್ ವಿತರಣಾ ಕಾರ್ಯ ಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಮದುವೆ, ಸಭೆ, ಸಮಾರಂಭಗಳಲ್ಲಿ ಜನ ಹೆಚ್ಚಾಗಿ ಸೇರುವುದನ್ನು ನಿಲ್ಲಿಸಬೇಕು. ಜೀವ ಇದ್ದರೆ ಜೀವನ ಎಂಬುದನ್ನು ಮೊದಲ ಅರ್ಥ ಮಾಡಿಕೊಳ್ಳಿ.
ಮಾಸ್ಕ್ ಇಲ್ಲದೆ ಮನೆಯಿಂದ ಹೊರ ಬರಬೇಡಿ, ಸಾಮಾಜಿಕ ಅಂತರಕ್ಕೆ ಒತ್ತು ಕೊಡಿ, ಭಾವನಾತ್ಮಕ ಸಂಬಂಧದ ಜೊತೆಗೆ ಆರೋಗ್ಯದ ಬಗ್ಗೆಯೂ ನಿಗಾವಹಿಸಿ ಎಂದು ಸ್ವಾಮೀಜಿ ಜನತೆಗೆ ಮನವಿ ಮಾಡಿದರು.
ಸನ್ಮಾನಿತರಾದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಮಾತ ನಾಡಿ, ನಾವು ನಮ್ಮ ಹಿರಿಯ ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಹೊರಗಡೆ ಓಡಾಡುವವರು ಬಹಳ ಜಾಗೃತಿಯಿಂದಿರಬೇಕು. ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವಾದರೆ ಕೂಡಲೇ ಆಸ್ಪತ್ರೆಗೆ ಕರೆ ತನ್ನಿ ಎಂದು ಸಲಹೆ ನೀಡಿದರು.
ಸನ್ಮಾನಿತರಾದ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಡಿವೈಎಸ್ಪಿ ಹಿಂಡಸಘಟ್ಟಿಯ ಪಿ.ಬಿ. ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ವೀರಬಸಪ್ಪ, ಕೊಕ್ಕನೂರು ಆರೋಗ್ಯ ಕೇಂದ್ರದ ಡಾ. ಖಾದರ್, ನೋಡಲ್ ಅಧಿಕಾರಿ ನಂದಿತಾವರೆಯ ಡಾ. ವಿ.ಟಿ. ಬಸವರಾಜ್, `ಜನತಾವಾಣಿ’ ವರದಿಗಾರ ಜಿಗಳಿ ಪ್ರಕಾಶ್ ಮಾತನಾಡಿದರು.
ಹಿರಿಯರಾದ ಪೂಜಾರ್ ಬಸಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಹಿಂಡಸಘಟ್ಟಿ ಪರಮೇಶ್ವರಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ.ಪಂ. ಸದಸ್ಯ ನಂದಿತಾವರೆ ಬಸವಲಿಂಗಪ್ಪ, ಮೆಡಿಕಲ್ ಷಾಪ್ ಮಾಲೀಕರಾದ ಎಂ.ಆರ್. ಮಾರಪ್ಪ, ಎನ್.ಕೆ. ರಾಜೀವ್, ಪುರಸಭೆ ಅಧಿಕಾರಿಗಳಾದ ಉಮೇಶ್, ನವೀನ್ ಮತ್ತಿತರರು ಭಾಗವಹಿಸಿದ್ದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ಜಿ.ಪಂ. ಮಾಜಿ ಸದಸ್ಯೆ ಶ್ರೀಮತಿ ಚಿದಾನಂದಮ್ಮ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ವೈದ್ಯ ಡಾ|| ಟಿ. ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ತ್ರೀರೋಗ ಹಾಗೂ ಹೆರಿಗೆ ತಜ್ಞ ಡಾ|| ಅಪೂರ್ವ ಸ್ವಾಗತಿಸಿದರು. ಶಿಕ್ಷಕ ಹನುಮಗೌಡ ನಿರೂಪಿಸಿದರು. ಜಿ. ಬೇವಿನಹಳ್ಳಿಯ ಹೆಚ್.ಬಿ. ಶ್ರೀಕಾಂತ್ ವಂದಿಸಿದರು.