ಶಿಷ್ಯ ವೇತನಕ್ಕೆ ವೈದ್ಯ ವಿದ್ಯಾರ್ಥಿಗಳ ಆಗ್ರಹ

ನಗರದ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ

ದಾವಣಗೆರೆ, ಜೂ.29- ಸರ್ಕಾರ ಶಿಷ್ಯ ವೇತನ ಮಂಜೂರು ಮಾಡದಿರುವುದರ ವಿರುದ್ಧ ನಗರದಲ್ಲಿ ಇಂದು ಸರ್ಕಾರದ ಕೋಟಾದಡಿ ಪ್ರವೇಶ ಪಡೆದಿರುವ ಜೆಜೆಎಂ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. 

ಜಗದ್ಗುರು ಶ್ರೀ ಜಯದೇವ ಮುರುಘ ರಾಜೇಂದ್ರ ವೃತ್ತದ ಬಳಿ ಎಬಿವಿಪಿ ಬೆಂಬಲ ದೊಂದಿಗೆ ಜಮಾಯಿಸಿದ್ದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು, ದೈಹಿಕ ಅಂತರ ಕಾಯ್ದುಕೊಂಡು ಬೇಡಿಕೆ ಈಡೇರಿಕೆಗೆ ಧರಣಿ ಮುಖೇನ ಬಿಗಿಪಟ್ಟು ಹಿಡಿದರು.

ಸರ್ಕಾರದ ಕೋಟಾದಡಿಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳಾಗಿ ದಾಖಲಾತಿ ಹೊಂದಲಾಗಿದ್ದು,  ಶಿಷ್ಯ ವೇತನ ನೀಡಲಾಗುತ್ತಿತ್ತು. ಆದರೆ, ಕಳೆದ 16 ತಿಂಗಳಿನಿಂದ ಅದನ್ನು ಸ್ಥಗಿತಗೊಳಿಸಲಾಗಿದ್ದು ಬಡವರು, ಮಧ್ಯಮ ವರ್ಗದಿಂದ ಬಂದಂತಹ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಶಿಷ್ಯ ವೇತನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. 

ಈ ವಿಚಾರವಾಗಿ ಕಾಲೇಜಿನ ಆಡಳಿತ ಮಂಡಳಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೆ ಸರ್ಕಾರ ನೀಡಬೇಕು ಎಂದು ಹೇಳುತ್ತದೆ. ಸರ್ಕಾರದ ಬಳಿ ಹೋದರೆ ಕಾಲೇಜಿನ ಆಡಳಿತ ಮಂಡಳಿ ನೀಡುತ್ತದೆ ಎಂದು ನಮ್ಮನ್ನು ಅಲೆದಾಡಿಸಿ, ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಕಷ್ಟಪಟ್ಟು ಓದಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ ಕಷ್ಟ ಅನುಭವಿಸುವಂತಾಗಿದೆ ಎಂದು ಅಳಲಿಟ್ಟರು. 

ಕಳೆದ ಮೂರು ತಿಂಗಳಿನಿಂದ ಕೋವಿಡ್ ರೋಗಿಗಳಿಗೆ ನೀಡುವ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದೇವೆ. ಮುಂದೆಯೂ ನಾವು ಈ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ಇದನ್ನಾದರೂ ಸರ್ಕಾರ ಪರಿಗಣಿಸಬೇಕು. ಸಿ.ಜೆ. ಆಸ್ಪತ್ರೆಯಲ್ಲಿ ಶೇ.10ರಷ್ಟು ಸರ್ಕಾರಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದರೆ ಉಳಿದ ಶೇ.90ರಷ್ಟು ಈ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ ಎಂದರು. 

ಈ ಅನಿರ್ದಿಷ್ಟಾವಧಿ ಮುಷ್ಕರದಿಂದ ಯಾರಿಗೂ ತೊಂದರೆ ಆಗದಂತೆ ವೈದ್ಯಕೀಯ ಸೇವೆ ಮಾಡುತ್ತೇವೆ. ಸಾರ್ವಜನಿಕರಿಗೆ, ರೋಗಿಗಳಿಗೆ ಇದರಿಂದ ತೊಂದರೆ ಉಂಟಾಗುವುದಿಲ್ಲ. ಜೂನ್ 17, 2020ರಂದು ಸುಪ್ರೀಂ ಕೋರ್ಟ್ ಕೂಡ ಕೊರೊನಾ ವೈದ್ಯರಿಗೆ ಸಂಬಳ ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ. ಇದರ ಅನ್ವಯವಾದರೂ ಸರ್ಕಾರ ಶಿಷ್ಯ ವೇತನ ನೀಡಬೇಕು ಎಂದು ಒತ್ತಾಯಿಸಿರುವ ಪ್ರತಿಭಟನಾಕಾರರು, ಶಿಷ್ಯ ವೇತನ ಸಿಗುವವರೆಗೂ ನಮ್ಮ ಮುಷ್ಕರ ಮುಂದುವರೆಯಲಿದೆ ಎಂದಿದ್ದಾರೆ.

ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಡಾ. ರಾಹುಲ್, ಡಾ. ಮೇಘನಾ, ಡಾ. ಹಿತಾ, ಡಾ. ನಿಧಿ, ಡಾ. ಹರೀಶ್ ಸೇರಿದಂತೆ ಅನೇಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

error: Content is protected !!