ಕೊರೊನಾ ಮುಚ್ಚಿಡುವ ವಿಷಯ ಅಲ್ಲ, ಆತಂಕ ಬೇಕಿಲ್ಲ

ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ

ನ್ಯಾಮತಿ, ಜೂ.29- ಕೊರೊನಾ ಮುಚ್ಚಿಡುವ ವಿಷಯವೂ ಅಲ್ಲ, ಕೊರೊನಾ ಬಂದರೆ ಯಾರೊಬ್ಬರೂ ಆತಂಕವೂ ಪಡಬೇಕಿಲ್ಲ. ಆಸ್ಪತ್ರೆಗೆ ತೋರಿಸಿಕೊಂಡು ಗುಣಮುಖರಾಗುವುದು ಎಲ್ಲರ ಕರ್ತವ್ಯ ಎಂದು ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಹೇಳಿದರು.

ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದಲ್ಲಿ ಇಂದು ಏರ್ಪಾಡಾಗಿದ್ದ ಅಂಗನವಾಡಿ ಕಟ್ಟಡ ಹಾಗೂ ವಾಣಿಜ್ಯ ಕಟ್ಟಡ ಮೇಲಂತಸ್ತು ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊರೊನಾ ಬಂದವರು ವಯಸ್ಸಾದವರು, ಗರ್ಭಿಣಿ ಸ್ತ್ರೀಯರು ಹಾಗೂ ಸಣ್ಣ ಮಕ್ಕಳನ್ನು ಮುಟ್ಟುವುದು ಸರಿಯಲ್ಲ. ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದಿಲ್ಲ. ಹಾಗಾಗಿ ಬಹಳ ಜಾಗೃತಿಯಿಂದ ಇರಬೇಕು. ಬಹುಶಃ ಕೊರೊನಾ ತೊಲಗುವವರೆಗೂ ಬಹಳಷ್ಟು ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಪಂಚದಲ್ಲಿನ ಎಲ್ಲಾ ರಾಷ್ಟ್ರಗಳು ಕೊರೊನಾದಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿವೆ. ಇಂತಹ ಸಂದರ್ಭದಲ್ಲಿ  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶೇಷವಾಗಿ 1.70 ಲಕ್ಷ  ಕೋಟಿ ರೂ. ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ತದನಂತರ 20 ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರದ ಅರ್ಧ ಬಜೆಟ್ ಹಣವನ್ನು ಕೊರೊನಾ ಸಂಕಷ್ಟದಲ್ಲಿ ಸಿಲುಕಿದ್ದ ರೈತರು, ಸಣ್ಣ ಉದ್ದಿಮೆ ಹಾಗೂ ಕಾರ್ಮಿಕರು ಸೇರಿದಂತೆ ಅನೇಕ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ   ಎಂ.ಪಿ.ರೇಣು ಕಾಚಾರ್ಯ ಮಾತನಾಡಿ, ಸುರಹೊನ್ನೆ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಹಾಗೂ ವಾಣಿಜ್ಯ ಕಟ್ಟಡ ಮೇಲಂತಸ್ತು ಮಳಿಗೆಗಳ ಉದ್ಘಾಟನೆ ಸೇರಿದಂತೆ, 95 ಲಕ್ಷದ ಸಿಮೆಂಟ್ ಸಿಸಿ ರಸ್ತೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ ಎಂದು ತಿಳಿಸಿದರು.

ಅವಳಿ ತಾಲ್ಲೂಕುಗಳಾದ ಹೊನ್ನಾಳಿ – ನ್ಯಾಮತಿ ತಾಲ್ಲೂಕಿನಲ್ಲಿ 7 ಪ್ರಕರಣ ಬಂದು ವಾಸಿಯಾಗಿದ್ದು, ಇದೀಗ ಮತ್ತೆ 5 ಕೇಸ್ ಗಳು ಕಂಡುಬಂದಿವೆ. ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಸ್ವಯಂ ಪ್ರೇರಿತರಾಗಿ ಜನರು ಜಾಗೃತಿ ಹೊಂದಬೇಕು ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಮಾತನಾಡಿ ದರು. ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಉಮಾ ಎಂ.ಪಿ.ರಮೇಶ್, ಎಂ.ಆರ್.ಮಹೇಶ್, ಸುರಹೊನ್ನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಿರಿಯಮ್ಮ, ಉಪಾಧ್ಯಕ್ಷ ಎಸ್.ಸದಾಶಿವಪ್ಪ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: Content is protected !!