ದಾವಣಗೆರೆ, ಅ. 1 – ಭಾರತೀಯ ಅಂಚೆ ಇಲಾಖೆ ವತಿಯಿಂದ ಕಳೆದ ಸೆ. 29ರಂದು ಆಯೋಜಿಸಲಾಗಿದ್ದ ‘ಐಪಿಪಿಬಿ ಮಹಾ ಲಾಗಿನ್’ ಕಾರ್ಯಕ್ರಮದಡಿ ದಿನವಿಡೀ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐ.ಪಿ.ಪಿ.ಬಿ.) ಖಾತೆ ತೆರೆಯಲಾಯಿತು.
ದಾವಣಗೆರೆ ಜಿಲ್ಲೆಯಲ್ಲಿ ಅಂದು ಒಟ್ಟಾರೆ 2,800ಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ಬಹಳಷ್ಟು ಖಾತೆಗಳು ಗ್ರಾಮೀಣ ಪ್ರದೇಶದವುಗಳಾಗಿವೆ. ಅಂಚೆ ಇಲಾಖೆಯ ಚಿತ್ರದುರ್ಗ ವಿಭಾಗದಲ್ಲಿ ಬರುವ ದಾವಣಗೆರೆ, ಹರಿಹರ ಹಾಗೂ ಜಗಳೂರು ತಾಲ್ಲೂಕುಗಳಲ್ಲಿ ಒಟ್ಟಾರೆ 1,711 ಖಾತೆಗಳನ್ನು ತೆರೆಯಲಾಗಿದೆ. ಶಿವಮೊಗ್ಗ ವಿಭಾಗದಲ್ಲಿ ಬರುವ ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿಗಳಲ್ಲಿ ಒಟ್ಟು 1,150 ಖಾತೆಗಳನ್ನು ತೆರೆಯಲಾಗಿದೆ.
ಎರಡು ವರ್ಷಗಳ ಹಿಂದೆ ಭಾರತೀಯ ಅಂಚೆ ಇಲಾಖೆಯು ಐ.ಪಿ.ಪಿ.ಬಿ. ಸೇವೆಯನ್ನು ಆರಂಭಿಸುವ ಮೂಲಕ, ಡಿಜಿಟಲ್ ಪಾವತಿಯಲ್ಲಿ ಹೊಸ ಹೆಜ್ಜೆ ಇಟ್ಟಿತ್ತು. ಆ ಸೇವೆಯನ್ನು ವಿಸ್ತರಿಸಲು ಮಹಾ ಲಾಗಿನ್ ಅಭಿಯಾನವನ್ನು ನಡೆಸಲಾಗಿತ್ತು.
ಆ ದಿನದಂದು ಅಂಚೆ ಕಚೇರಿ ಹಾಗೂ ಪೋಸ್ಟ್‌ಮ್ಯಾನ್‌ಗಳ ಮೂಲಕ ದಿನವಿಡೀ ಹೊಸ ಖಾತೆಗಳನ್ನು ತೆರೆಯಲಾಯಿತು. ಆಧಾರ್ ಹಾಗೂ ಮೊಬೈಲ್ ಸಂಖ್ಯೆಗಳ ಮೂಲಕ ಕಾಗದ ರಹಿತವಾಗಿ ಖಾತೆಗಳನ್ನು ತೆರೆಯಲಾಗಿದೆ.
ಈ ಬಗ್ಗೆ ವಿವರ ನೀಡಿರುವ ದಾವಣಗೆರೆ ಉಪ ವಿಭಾಗದ ಸಹಾಯಕ ಅಧೀಕ್ಷಕ ಜೆ.ಎಸ್. ಗುರುಪ್ರಸಾದ್, ನಗರ ಪ್ರದೇಶಗಳಲ್ಲಿ ಸುಲಭವಾಗಿ ಡಿಜಿಟಲ್ ಪಾವತಿ ಸೇವೆಗಳು ಲಭ್ಯವಿರುತ್ತವೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಈ ಸೇವೆಗಳು ದುರ್ಲಭ. ಹೀಗಾಗಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಒತ್ತು ನೀಡಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಮನೆ ಬಾಗಿಲಿಗೆ ಬ್ಯಾಂಕಿಂಗ್, ಮನೆ ಬಾಗಿಲಲ್ಲಿ ಖಾತೆ ತೆರೆಯುವುದು, ಕಾಗದ ರಹಿತ ಖಾತೆ ತೆರೆಯುವುದು, ಚೆಕ್ ಸೇವೆ, ನೆಫ್ಟ್, ಆರ್‌ಜಿಟಿಎಸ್, ಐಎಂಪಿಎಸ್ ಸೇವೆ, ಬಿಲ್‌ಗಳ ಪಾವತಿ, ಸಬ್ಸಿಡಿಗಳು ಸ್ಕಾಲರ್‌ಶಿಪ್‌ಗಳನ್ನು ನೇರ ಜಮಾ ಮಾಡುವುದು, ಆರ್.ಡಿ., ಸುಕನ್ಯಾ ಹಾಗೂ ಪಿಪಿಎಫ್‌ಗಳ ಆನ್‌ಲೈನ್ ಪಾವತಿ ಹಾಗೂ ವರ್ತಕರಿಗೆ ಚಾಲ್ತಿ ಖಾತೆ ಮೂಲಕ ಚೆಕ್ ಬುಕ್ ವಿತರಣೆಯಂತಹ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದವರು ಹೇಳಿದ್ದಾರೆ.
ಆಧಾರ್ ಹಾಗೂ ದೂರವಾಣಿ ಸಂಖ್ಯೆಯನ್ನು ಜೋಡಣೆ ಮಾಡಿರುವ ಯಾವುದೇ ಬ್ಯಾಂಕ್ ಖಾತೆಯಿಂದ ಎ.ಇ.ಪಿ.ಎಸ್. ಸೌಲಭ್ಯದಿಂದ ಪೋಸ್ಟ್‌ಮ್ಯಾನ್ ಮೂಲಕ ಹಣ ಬಿಡಿಸಿಕೊಳ್ಳುವ ಸೌಲಭ್ಯವೂ ಇದೆ ಎಂದವರು ತಿಳಿಸಿದ್ದಾರೆ.