ದಾವಣಗೆರೆ, ಅ.1- ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಯುವತಿ ಮನೆಯತ್ತ ಕಾಲ್ನಡಿಗೆ ಜಾಥಾ ಮೂಲಕ ತೆರಳುತ್ತಿದ್ದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರ ಬಂಧನ ವಿರೋಧಿಸಿ ನಗರದಲ್ಲಿ ಇಂದು ಸಂಜೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬೇತೂರು ರಸ್ತೆಯ ಅರಳಿ ಮರ ವೃತ್ತದ ಬಳಿ ಜಮಾಯಿಸಿದ್ದ ಪ್ರತಿಭಟನಾಕಾರರು, ಮೇಣದ ಬೆಳಕು ಮೂಡಿಸುತ್ತಾ, ಸಂತ್ರಸ್ತ ಯುವತಿ ಮನೆಗೆ ತೆರಳುತ್ತಿದ್ದಾಗ ವಾಹನ ತಡೆ ಹಿಡಿದು ರಾಹುಲ್ ಗಾಂಧಿ ಅವರನ್ನು ನೆಲಕ್ಕೆ ತಳ್ಳಿ ಲಾಠಿ ಪ್ರಹಾರ ಮಾಡಿದ ಉತ್ತರ ಪ್ರದೇಶದ ಪೊಲೀಸರ ಕ್ರಮವನ್ನು ಖಂಡಿಸಿದರು.
ವಾಹನ ತಡೆದರೂ ಕಾಲ್ನಡಿಗೆಯಲ್ಲಿ ತೆರಳುತ್ತಿರುವಾಗ ಬಂಧಿಸಿದ ಕ್ರಮ ಹಾಗೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸರ್ಕಾರದ ಗೂಂಡಾ ರಾಜಕೀಯ ಕ್ರಮವನ್ನು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಖಾಲಿದ್ ಅಹಮ್ಮದ್ ತೀವ್ರವಾಗಿ ಆಕ್ಷೇಪಿಸಿದರು.
ಉತ್ತರ ಪ್ರದೇಶದಲ್ಲಿ ಗೂಂಡಾ ರಾಜ್ಯವನ್ನು ಕೊನೆಗಾಣಿಸಲು ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು. ದೀನ ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಹಿಡಿಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಹೆಚ್.ಜೆ. ಮೈನುದ್ದೀನ್, ಕಾಂಗ್ರೆಸ್ ಮುಖಂಡರಾದ ಹೆಚ್. ಸುಭಾನ್ ಸಾಬ್, ಸೈಯದ್ ಕಬೀರ್, ಪ್ರವೀಣ್ ಹುಲ್ಲು ಮನೆ, ಸಂದೀಪ್ಕುಮಾರ್, ಜಮೀರಾ ನವೀದ್, ಎನ್ಎಸ್ ಯುಐ ಮುಜಾಹಿದ್, ಖಾಲಿದ್ ಪೈಲ್ವಾನ್, ಸದ್ದಾಂ, ಚಂದ್ರು, ಅಜ್ಮತ್ವುಲ್ಲಾ, ಸಂತೋಷ್ ಕುಮಾರ್, ಸೈಯದ್ ಮುಸ್ತಫಾ, ಫಹೀಂ, ಸಾಧಿಕ್ಖಾನ್, ಬಾಷಾ, ಮುಸ್ತಾಕ್ ಅಹಮ್ಮದ್ ಸೇರಿದಂತೆ ಇತರರು ಭಾಗವಹಿಸಿದ್ದರು.