ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಅನಿವಾರ್ಯ : ಶಾಸಕ ರಾಮಪ್ಪ

ಮಲೇಬೆನ್ನೂರು :  ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ

ಮಲೇಬೆನ್ನೂರು, ಜೂ.25- ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸ್ವಯಂ ಲಾಕ್‌ಡೌನ್‌ ಅನಿವಾರ್ಯ ಎಂದು ಶಾಸಕ ಎಸ್‌.ರಾಮಪ್ಪ ಹೇಳಿದರು.

ಪಟ್ಟಣದ ಶಿವ ವಿವಿಧೋದ್ದೇಶ ಸಹಕಾರ ಸಂಘದ ಆವರಣದಲ್ಲಿ ಹರಿಹರ ತಾಲ್ಲೂಕು ಆಡಳಿತ ಹಾಗೂ ಸಹಕಾರ ಇಲಾಖೆ ಮತ್ತು ಎಲ್ಲಾ ಸಹಕಾರ ಸಂಘಗಳ ಆಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಚೆಕ್‌ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚನ್ನಗಿರಿ ಮತ್ತು ಹರಿಹರ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಎಲ್ಲರೂ ಸೇರಿ ಸ್ವಯಂಪ್ರೇರಿತ ಲಾಕ್‌ಡೌನ್‌ ಮಾಡಲಾಗಿದೆ. ಅದೇ ರೀತಿ ಎಲ್ಲೆಲ್ಲಿ ಕೊರೊನಾ ವೈರಸ್‌ ಹರಡುತ್ತಿದೆಯೋ ಅಲ್ಲಲ್ಲಿ ಸೆಲ್ಫ್‌ ಲಾಕ್‌ಡೌನ್‌ ಮಾಡುವುದು ಸೂಕ್ತವಾಗಿದೆ.

ಮಲೇಬೆನ್ನೂರಿನಲ್ಲೂ ಕೂಡಾ ಮುಂಜಾಗ್ರತಾ ಕ್ರಮವಾಗಿ ಅರ್ಧದಿನ ಲಾಕ್‌ಡೌನ್‌ ಮಾಡಿದರೆ ಒಳ್ಳೆಯದು ಎಂದು ಶಾಸಕ ಎಸ್‌. ರಾಮಪ್ಪ ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ದೀಪಾ ಜಗದೀಶ್‌ ಮಾತನಾಡಿ, ಆಶಾ ಕಾರ್ಯಕರ್ತೆಯರು ಬಹಳ ಕಡೆಗಳಲ್ಲಿ ತೊಂದರೆ ಅನುಭವಿಸಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಎಲ್ಲಾ ದೃಷ್ಟಿಯಿಂದ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.  

ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎನ್‌.ಜಿ. ರುದ್ರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ರ್ಸ್‌ಗಳಾದ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್‌, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಉಪತಹಶೀಲ್ದಾರ್‌ ಆರ್‌. ರವಿ, ಪಿಎಸ್‌ಐ ವೀರಬಸಪ್ಪ ಅವರನ್ನು ಶಿವ ವಿವಿಧೋದ್ದೇಶ ಸಹಕಾರ ಸಂಘದಿಂದ ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.

ಸಂಘದ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರ, ಪಟ್ಟಣಗಳಲ್ಲಿ ಕೊರೊನಾ ಹರಡದಂತೆ ತಡೆಗಟ್ಟಲು ಟೆಸ್ಟ್‌ಗಳನ್ನು ಹೆಚ್ಚಿಸಬೇಕು. ಜೊತೆಗೆ ವಾರ್ಡ್‌ಗೊಂದು ಕೊರೊನಾ ಟಾಸ್ಕ್‌ಪೋರ್ಸ್‌ ಸಮಿತಿ ರಚಿಸಬೇಕು ಎಂದು ಚಂದ್ರಶೇಖರ್ ಸಲಹೆ ನೀಡಿದರು.

ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಪಿ.ಎಸ್‌. ಹನುಮಂತಪ್ಪ, ಜಿಗಳಿ ಆನಂದಪ್ಪ, ಎಪಿಎಂಸಿ ಸದಸ್ಯರಾದ ಜಿ. ಮಂಜುನಾಥ್‌ ಪಟೇಲ್‌, ಸಹಕಾರ ಸಂಘದ ನಿರ್ದೇಶಕರಾದ ಹೆಚ್‌.ಜಿ. ಚಂದ್ರಶೇಖರ್‌, ಬೆಳ್ಳೂಡಿ ರವಿಶಂಕರ್‌, ಸರೋಜಮ್ಮ, ನಾಗರತ್ನಮ್ಮ, ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಶಿವಕುಮಾರ್‌, ವ್ಯವಸ್ಥಾಪಕ ಸುರೇಶ್‌, ನಿಟ್ಟೂರಿನ ಧನಂಜಯ, ಕೆ.ಪಿ. ಗಂಗಾಧರ್‌, ಎನ್‌.ಎನ್‌. ತಳವಾರ್, ಸಂಘದ ಕಾರ್ಯದರ್ಶಿ ಎಸ್‌.ಎಂ. ಉಮೇಶ್‌ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಲೇಬೆನ್ನೂರು ಹೋಬಳಿಯ 63 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಗಳ ಪ್ರೋತ್ಸಾಹ ಧನ ಚೆಕ್‌ ನೀಡಿ, ಸನ್ಮಾನಿಸಲಾಯಿತು.

ಮೇಘನಾ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಯಲವಟ್ಟಿ ಅಂಜಿನಪ್ಪ ಸ್ವಾಗತಿಸಿದರು. ಸಂಘದ ನಿರ್ದೇಶಕರೂ ಆದ ವಕೀಲ ಹೆಚ್‌.ಬಿ. ಶಿವಕುಮಾರ್‌ ನಿರೂಪಿಸಿದರೆ, ಸಂಘದ ನಿರ್ದೇಶಕರೂ ಆದ ಯುವ ಪತ್ರಕರ್ತ ಜಿಗಳಿ ಪ್ರಕಾಶ್‌ ವಂದಿಸಿದರು.

error: Content is protected !!