ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯಿಂದ ಮನವಿ
ದಾವಣಗೆರೆ,ಅ.1- ಸಿನಿಮಾ ಸೆಲೆಬ್ರಿಟಿಗಳು, ವಿದ್ಯಾವಂತರು, ಬುದ್ದಿವಂತರು ಮಾದಕ ವಸ್ತುಗಳೊಂದಿಗೆ ನಂಟಿರುವ ವಿಚಾರ ಚರ್ಚೆಯಾಗುತ್ತಿದ್ದು, ಮಾದಕ ದ್ರವ್ಯಗಳ ಮೂಲ ಪತ್ತೆಗೆ ಇದು ಸಕಾಲವಾಗಿದೆ. ಆದ್ದರಿಂದ ಇದಕ್ಕಾಗಿ ವಿಶೇಷ ತನಿಖಾ ತಂಡ ರಚಿಸಿ ಮಟ್ಟ ಹಾಕಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮಾದಕ ವಸ್ತುಗಳ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ತನಿಖೆ ಕೈಗೊಂಡು ಯುವಜನತೆ ಮತ್ತು ಸಮಾಜವನ್ನು ಮಾದಕ ವಸ್ತುಗಳ ಅಪಾಯದಿಂದ ರಕ್ಷಿಸಬೇಕು. ಮಾದಕ ವಸ್ತುಗಳ ನಿಯಂತ್ರಣ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಕೋರಿದರು.
ಡ್ರಗ್ಸ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸಬೇಕು. ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತುಗಳ ಕರಾಳಹಸ್ತ ಚಾಚದಂತೆ ಎಚ್ಚರ ವಹಿಸಬೇಕು. ಅಂತರ್ಜಾಲ ಬಳಸಿಕೊಂಡು ಡ್ರಗ್ಸ್ ವ್ಯವಹಾರದ ಕಳ್ಳ ಸಾಗಣೆ ಹಾಗೂ ಮಾರಾಟ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಸುರೇಶ್ ಹೊಸಕೆರೆ, ಶ್ರೀ.ಕ್ಷೇ.ಗ್ರಾ.ಯೋ, ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ನಿರ್ದೇಶಕ ಜಯಂತ್ ಪೂಜಾರಿ, ಪ್ರಮುಖರಾದ ಎಂ.ಬಿ. ನಾಗರಾಜ ಕಾಕನೂರು, ಎಸ್. ರಾಜಶೇಖರ ಕೊಂಡಜ್ಜಿ, ಅಣಬೇರು ಮಂಜಣ್ಣ, ಪಿ.ಎಸ್. ಅರವಿಂದ., ಎನ್.ಜಿ. ನಾಗಣ್ಣಗೌಡ್ರು, ಶೋಭಾ, ಮಂಜುನಾಥ ಸುರಳಿಮನೆ, ಶ್ರೀನಿವಾಸರಾವ್ ಮತ್ತಿತರರಿಇದ್ದರು.