ಹರಪನಹಳ್ಳಿ, ಜೂ.25- ಕೊರೊನಾ ಸೋಂಕಿತ ಮುಖ್ಯ ಪೇದೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಡ್ಯೂಟಿ ಮಾಡಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಾಗೂ ಅಲ್ಲಿನ ಸಿಬ್ಬಂದಿ ಆತಂಕಗೊಂಡಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ಯೊಬ್ಬರು ಕಳೆದ 1 ವಾರದಿಂದ ತೋರಣಗಲ್ ಕಂಟೈನ್ಮೆಂಟ್ ಜೋನ್‌ನಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ್ದಾರೆ.
ಜೂ.22 ರಂದು ಅರಸಿಕೆರೆಗೆ ಮರಳಿ ಬಂದಿದ್ದಾರೆ. 23 ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ, 24 ರಂದು ಪೋತಲಕಟ್ಟಿ, ಚಿಕ್ಕಮೇಗಳಗೇರಿ, ಗುಳೇದಹಟ್ಟಿ, ಗ್ರಾಮಗಳಲ್ಲಿ ಗ್ರಾಮ ಗಸ್ತು (ಬೀಟ್) ಡ್ಯೂಟಿ ಮಾಡಿ ಮರಳಿ ವಾಪಸ್ಸು ಅರಸಿಕೆರೆಯ ತಮ್ಮ ಕ್ವಾಟ್ರಸ್‌ಗೆ ಮರಳಿದ್ದಾರೆ. ಉಚ್ಚಂಗಿದುರ್ಗ ಗ್ರಾಮದ ಸ.ಹಿ.ಮಾ. ಪ್ರಾಥಮಿಕ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಇಂದೂ ಸಹ ಡ್ಯೂಟಿ ಮಾಡಿ ಬಂದಿದ್ದಾರೆ.
ಅರಸಿಕೆರೆ ಪೊಲೀಸ್ ಠಾಣೆಗೆ ತೆರಳಿ, ಅಲ್ಲಿ ಬೀಟ್ ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ. ಈಗ ಅಲ್ಲಿಯ ಪಿಎಸ್‌ಐ ಸೇರಿ ಪೊಲೀಸ್ ಠಾಣೆಯ 6 ಜನ ಪೊಲೀಸರು ಹಾಗೂ ಸೋಂಕಿತ ಪೇದೆಯ ಪತ್ನಿ, ಮಗಳು, ತಾಯಿ ಪ್ರಾಥಮಿಕ ಸಂಪರ್ಕದಲ್ಲಿದ್ದು, ಅವರನ್ನು ಹಾಗೂ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್‌ಗೆ ಅಳವಡಿಸಲು ತಾಲ್ಲೂಕು ಆಡಳಿತ ನಿರ್ಧರಿಸಿದೆ.
ಅರಸಿಕೆರೆ ಪೊಲೀಸ್ ಠಾಣೆ ಸೀಲ್‌ಡೌನ್ ಆಗುವ ಸಾಧ್ಯತೆ ಇದೆ. ಸೋಂಕಿತ ಮುಖ್ಯಪೇದೆ ಬೀಟ್ ಡ್ಯೂಟಿ ಮಾಡಿದ ಮೂರು ಗ್ರಾಮಗಳ ಜನರು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿಬ್ಬಂದಿ ಹಾಗೂ ಮಕ್ಕಳಲ್ಲಿ ಆತಂಕ ಸೃಷ್ಟಿಯಾಗಿದೆ. ತಹಶೀಲ್ದಾರ್ ಡಾ. ನಾಗವೇಣಿ, ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಅರಸಿಕೆರೆ ಠಾಣೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.