ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ವಾಲ್ಮೀಕಿ ಗುರುಪೀಠದ ಶ್ರೀಗಳು
ರಾಣೇಬೆನ್ನೂರು, ಸೆ.30- ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದ ಆಶೋತ್ತರಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ವ್ಯವಸ್ಥೆಯಲ್ಲಿ ತಂದಿದ್ದಾರೆ ಎಂದು ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಶ್ರೀಗಳು, ಇಲ್ಲಿನ ವಾಲ್ಮೀಕಿ ಭವನದ ಹೆಚ್ಚುವರಿ ಕಟ್ಟಡದ ಶಿಲಾನ್ಯಾಸ ಮಾಡಿ, ಆಶೀರ್ವಚನ ನೀಡಿದರು.
ಮಹಾತ್ಮರ ಬದುಕು ನಮಗೆ ಮಾರ್ಗದರ್ಶನ ನೀಡುತ್ತದೆ. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಆಚರಣೆಗಳು ಅವರ ಬದುಕಿನಲ್ಲಿವೆ. ಅವರ ಜಾತಿ ಆಚರಣೆ ಮೂಲಕ ಸಮಾಜದ ಆಶೋತ್ತರಗಳನ್ನು ಆಚರಣೆಯಲ್ಲಿ ತರಬೇಕು ಎಂದು ಶ್ರೀ ಗಳು ಕರೆ ನೀಡಿದರು.
ವಾಲ್ಮೀಕಿ ಭವನಕ್ಕೆ ನಗರಸಭೆಯಿಂದ ಅರ್ಧ ಎಕರೆ ಜಾಗ ಕೊಡಿಸುವಲ್ಲಿ ಬಹಳಷ್ಟು ಶ್ರಮ ವಹಿಸಿದ್ದ ಸಮಾಜದ ಮುಖಂಡ ಹಾಗೂ ನಗರಸಭೆ ಸದಸ್ಯ ಶಶಿಧರ ಬಸೇನಾಯ್ಕರ ಅವರನ್ನು ನಿರೂಪಕರು ತಡವಾಗಿ ವೇದಿಕೆಗೆ ಕರೆದರು. ಇದರಿಂದ ಬೇಸರಗೊಂಡ ಅವರು ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳದೆ ಹೊರ ನಡೆದರು.
ಶಾಸಕ ಅರುಣಕುಮಾರ ಪೂಜಾರ, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಜಿ.ಪಂ ಸದಸ್ಯ ಏಕನಾಥ ಭಾನುವಳ್ಳಿ, ತಾ.ಪಂ ಅಧ್ಯಕ್ಷೆ ಗೀತಾ ಲಮಾಣಿ, ಬಿಜೆಪಿ ಮುಖಂಡರಾದ ಮಂಜುನಾಥ ಓಲೇಕಾರ, ನಗರಸಭೆ ಸದಸ್ಯರಾದ ಪ್ರಕಾಶ ಪೂಜಾರ, ರಾಜು ಅಡ್ಮನಿ, ಗಂಗಮ್ಮ ಹಾವನೂರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.