ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ (ಲೀಡ್ ಬ್ಯಾಂಕ್) ಸಿದ್ಧಪಡಿಸಿರುವ 2020-21ನೇ ಸಾಲಿನ ಸಾಲ ಯೋಜನೆಯ ಪುಸ್ತಕವನ್ನು ಗುರುವಾರ ಸಂಸದ ಜಿ.ಎಂ. ಸಿದ್ದೇಶ್ವರ ಬಿಡುಗಡೆ ಮಾಡಿದರು.
ದಾವಣಗೆರೆ, ಜು. 25- ಇಲ್ಲಿಯವರೆಗೆ ಜಿಲ್ಲೆಯಲ್ಲಿ 9724 ಜನರು 252.53 ಕೋಟಿ ರೂ. ಶೈಕ್ಷಣಿಕ ಸಾಲ ಬಾಕಿ ಉಳಿಸಿಕೊಂಡಿದ್ದು ವಸೂಲಿಗೆ ಕ್ರಮ ಕೈಗೊಳ್ಳುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಲೀಡ್ ಬ್ಯಾಂಕ್ ಜಿಲ್ಲಾ ಮಟ್ಟದ ಪುನರಾವಲೋಕನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಳೆಯ ಸಾಲವನ್ನು ವಸೂಲಿ ಮಾಡದೆ ಬ್ಯಾಂಕುಗಳು ಹೊಸದಾಗಿ ಶೈಕ್ಷಣಿಕ ಸಾಲ ನೀಡುವುದಿಲ್ಲ. ಇದರಿಂದ ಭವಿಷ್ಯದ ಕನಸು ಹೊತ್ತು ಸಾಲ ಪಡೆದು ವಿದ್ಯಾಭ್ಯಾಸ ಮುಂದುವರೆಸುವ ಯುವಕರಿಗೆ ತೊಂದರೆ ಯಾಗುತ್ತದೆ. ಆದ್ದರಿಂದ ಸಾಲ ಬಾಕಿ ಉಳಿಸಿಕೊಂಡ 9724 ಜನರ ಸರ್ವೇ ಮಾಡಿ, ಸಾಲ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಕೋವಿಡ್ 19 ಕಾರಣದಿಂದ ಬಡವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೀಡುವ ನೆರವಿನ ಹಣವನ್ನು ಯಾವ ಕಾರಣಕ್ಕೂ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂದು ಸಂಸದರು ಬ್ಯಾಂಕ್ ಅಧಿಕಾರಿಗಳಿಗೆ ಹೇಳಿದರು.
ಸಮ್ ಥಿಂಗ್ ಈಸ್ ದೇರ್… ಸರ್ಕಾರದ ವಿವಿಧ ಯೋಜನೆಗಳಿಗೆ ಇಲಾಖೆಗಳು ಸಾಲಕ್ಕಾಗಿ ಅರ್ಜಿ ನೀಡಿದರೂ ಪೆಂಡಿಂಗ್ ಇಟ್ಟುಕೊಂಡ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಫಲಾನುಭವಿಗಳಿಗೆ ಸಾಲ ಮಂಜೂರಾದರೂ ಬ್ಯಾಂಕುಗಳು ಸಾಲ ನೀಡುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿವೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ದೀಪಾ ಜಗದೀಶ್ ಸಹ, ಯೋಜನೆಗಳಿಗೆ ಬ್ಯಾಂಕುಗಳು ಸಾಲ ನೀಡುತ್ತಿಲ್ಲ ಎಂದು ಆರೋಪಿಸಿದರು. ಸಿಇಒ ಪದ್ಮಾ ಬಸವಂತಪ್ಪ, ಸಾಲ ಮಂಜೂ ರಾದ ಅರ್ಜಿಗಳನ್ನು ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ? ಏಕೆ ಪೆಂಡಿಂಗ್ ಇಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಹೇಳಿದರು. ಸಂಸದ ಸಿದ್ದೇಶ್ವರ್, ಬ್ಯಾಂಕುಗಳ ಬೇಜವಾಬ್ದಾರಿ ತನದಿಂದಾಗಿ ಸಾಲ ಮಂಜೂರಾಗಿ 7 ತಿಂಗಳಾದರೂ ಸಾಲ ವಿತರಣೆಯಲ್ಲಿ ಲೋಪವಾಗುತ್ತಿದೆ. ಜನರನ್ನು ಅನಗತ್ಯವಾಗಿ ಓಡಾಡಿಸುತ್ತೀರಿ. ಅರ್ಜಿ ಪೆಂಡಿಂಗ್ ಇಡಲು ಕಾರಣವಾದರೂ ಏನು? `ಸಮ್ ಥಿಂಗ್ ಈಸ್ ದೇರ್.. ‘ ಎಂದು ಅನುಮಾನ ವ್ಯಕ್ತಪಡಿಸಿದರು.
ತಾಲ್ಲೂಕು ಮಟ್ಟದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಜುಲೈ ಮೊದಲ ವಾರದಲ್ಲಿ ಬಾಕಿ ಉಳಿದ ಹಾಗೂ ತಿರಸ್ಕರಿಸದ ಕಾರಣಗಳನ್ನು ತಿಳಿದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಭರವಸೆ ನೀಡಿದರು. ಇದೇ ವೇಳೆ ಸಂಸದರು, ಕೆಲವು ಇಲಾಖೆಗಳೂ ಸಹ ಹಣ ಪಡೆದು ಸಾಲ ಮಂಜೂರು ಮಾಡುವ ದೂರುಗಳಿವೆ. ಹಾಗೆ ಮಾಡಬೇಡಿ ಎಂದರು.
ಇದಕ್ಕೂ ಮುನ್ನ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ್ ಶಾಸ್ತ್ರಿ, 2019-20ನೇ ಸಾಲಿನಲ್ಲಿ 2478 ಜನರಿಗೆ 76.33 ಕೋಟಿ ರೂ. ಶೈಕ್ಷಣಿಕ ಸಾಲ ಮಂಜೂರಾಗಿದೆ. ಅದರಲ್ಲಿ 4643 ಜನರಿಗೆ 77.64 ಕೋಟಿ ಸಾಲ ನೀಡಲಾಗಿದೆ. ಮಾರ್ಚ್ ತಿಂಗಳವರೆಗೆ 9724 ಜನರ 252.53 ಕೋಟಿ ರೂ. ಸಾಲ ಬಾಕಿ ಇರುವುದಾಗಿ ಹೇಳಿದರು.
ಸಾಲ ನೀಡಿಕೆ ರೇಷಿಯೋ ಪಾಲಿಸದ ಬ್ಯಾಂಕ್ಗಳಿಗೆ ತರಾಟೆ: ಸಾಲ ನೀಡಿಕೆಯಲ್ಲಿ ಕನಿಷ್ಟ ಶೇ.60ರಷ್ಟು ರೆಶ್ಯೂ ಪಾಲಿಸದ ಬ್ಯಾಂಕುಗಳ ವ್ಯವಸ್ಥಾಪಕರುಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ತರಾಟೆಗೆ ತೆಗೆದುಕೊಂಡರು. ಲಕ್ಷ್ಮಿ ವಿಲಾಸ್ ಬ್ಯಾಂಕ್ ಶೇ.26, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಶೇ.43, ಕರೂರು ವೈಶ್ಯ ಬ್ಯಾಂಕ್ ಶೇ.46, ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ.49ರ, ಅಲಹಾಬಾದ್ ಬ್ಯಾಂಕ್ ಶೇ.57 ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.57ರಷ್ಟು ಮಾತ್ರ ಸಾಧನೆ ಮಾಡಿದ್ದವು.
ಕಡಿಮೆ ಸಾಧನೆಗೆ ಕಾರಣ ಕೇಳಿದ ಸಂಸದರು, ಯಾವ ಸಬೂಬು ಹೇಳದೆ ಶೇ.60ರಷ್ಟು ರೇಷಿಯೋ ಪಾಲಿಸಲೇ ಬೇಕು ಎಂದು ಸೂಚಿಸಿದರು.
ಮರುಪಾವತಿ `ಶಿಶು’ವಿಗೆ ಅಗ್ರಸ್ಥಾನ: ಮುದ್ರಾ ಸ್ಕೀಂನ ಶಿಶು, ಕಿಶೋರ್, ತರುಣ ಯೋಜನೆಯಡಿ ಪ್ರಸಕ್ತ ವರ್ಷ 47332 ಜನಕ್ಕೆ 320.45 ಕೋಟಿ ರೂ. ಸಾಲ ನೀಡಲಾಗಿದೆ. 715.41 ಕೋಟಿ ರೂ. ಬಾಕಿ ಇರುವುದಾಗಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ್ ಮಾಹಿತಿ ನೀಡಿದರು.
ಬಾಯಿ ಬಿಡದ ಬ್ಯಾಂಕ್ ಅಧಿಕಾರಿಗಳು : ಮುದ್ರಾ ಯೋಜನೆಯಡಿ ನೀಡಿದ ಸಾಲದ ಮರುಪಾವತಿ ಹೇಗಿದೆ? ಶೈಕ್ಷಣಿಕ ಸಾಲ ಪಡೆದವರು ಸಾಲ ತೀರಿಸುತ್ತಿದ್ದಾರೆಯೇ? ಸರ್ಕಾರದ ಯೋಜನೆ ಗಳಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಬಾಕಿ ಏಕೆ ಉಳಿಸಿ ಕೊಂಡಿದ್ದೀರಿ? ಎಂಬಿತ್ಯಾದಿ ಪ್ರಶ್ನೆಗಳನ್ನು ಸಂಸದರು ಪದೇ ಪದೇ ಕೇಳುತ್ತಿದ್ದರೂ ಬ್ಯಾಂಕ್ ಅಧಿಕಾರಿಗಳು ತುಟಿ ಪಿಟಿಕ್ ಎನ್ನದೆ ಕುಳಿತಿದ್ದರು. ಕೊನೆಗೆ ಬೇಸತ್ತ ಸಂಸದರು, ಮಾಹಿತಿ ಇಲ್ಲದೆ ಸಭೆಗೆ ಏಕೆ ಬರುತ್ತೀರಿ ಎಂದು ಅಸಮಾಧಾನ ಹೊರ ಹಾಕಿದರು.
ಸಂಸದರು ಸಾಲದ ರಿಕವರಿ ಹೇಗಿದೆ ? ಎಂದು ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಯಾರೂ ಉತ್ತರಿ ಸಲಿಲ್ಲ. ಯೋಜನೆ ಅನುಕೂಲವಾಗುತ್ತಿದೆಯೇ? ಅಥವಾ ದುರ್ಬಳಕೆಯಾಗುತ್ತಿದೆಯೇ? ಜನರು ಸಾಲವನ್ನು ಮರುಪಾವತಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲೇ ಇಲ್ಲ. ಆಗ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಕಿಶೋರ ಯೋಜನೆಯಡಿ ಚಿಕ್ಕ ಪ್ರಮಾಣದ ಸಾಲ ಮರು ಪಾವತಿಯಾಗುತ್ತಿದೆ. ಆದರೆ ಕಿಶೋರ್ ಹಾಗೂ ತರುಣ ಯೋಜನೆಯಡಿ ಪಡೆಯುವ ಸಾಲದ ಮರುವಪಾತಿ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಉತ್ತರಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಸಾಲ ನೀಡಿ ರಿಕವರಿಗೆ ಏನು ಕ್ರಮ ಕೈಗೊಂಡಿದ್ದೀರಿ? ಸಾಲಕ್ಕೆ ಸರ್ಕಾರವೇ ಗ್ಯಾರಂಟಿ ಇದೆ ಎಂದು ಸುಮ್ಮನೆ ಕೂರಬೇಡಿ. ಸಾಲದ ಹಣ ದುರುಪಯೋಗವಾಗಲು ಬಿಡಬೇಡಿ ಎಂದು ಹೇಳಿದರು.
ಸ್ವಸಹಾಯ ಸಂಘಗಳ ಸಾಲ ತೀರುವಳಿಯಲ್ಲಿ ಮುಂಚೂಣಿಯಲ್ಲಿದ್ದು, ಬ್ಯಾಂಕುಗಳು ಅಗತ್ಯ ನೆರವು ನೀಡಬೇಕು. ಕೇಂದ್ರ ಸರ್ಕಾರವು ಸಂಘಗಳಿಗೆ ನೀಡುವ ಸಾಲದ ಮೊತ್ತವನ್ನು 20 ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದು, ಸಂಘಗಳು ಬಯಸಿದರೆ ಬ್ಯಾಂಕುಗಳು ಸಾಲ ನೀಡಬೇಕು ಎಂದು ಸ್ವಸಹಾಯ ಸಂಘದ ಮಲ್ಲಿಕಾರ್ಜುನಪ್ಪ ಮನವಿ ಮಾಡಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್, ಸಿಇಒ ಪದ್ಮಾ ಬಸವಂತಪ್ಪ, ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕ ವಿ.ರವೀಂದ್ರ ಇತರರು ಉಪಸ್ಥಿತರಿದ್ದರು.