ಹರಿಹರ, ಜೂ.24- ನಗರ ಮತ್ತು ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡಿದ್ದರಿಂದ ಸೋಂಕಿತರ ಸಂಪರ್ಕದಲ್ಲಿ ಇದ್ದ 245 ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ.
ನಗರದ ಎ.ಕೆ. ಕಾಲೋನಿಯಲ್ಲಿ ವ್ಯಕ್ತಿಗಳು ವಾಸವಾ ಗಿರುವ ಮನೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ100 ಮೀಟರ್ ಒಳಗಿನ ಪ್ರದೇಶವನ್ನು ಕಂಟೈನ್ ಮೆಂಟ್ ಝೋನ್ ಆಗಿ ಗುರುತಿಸಿ, ಸೀಲ್ ಡೌನ್ ಮಾಡಲಾಗಿದೆ. ಮೊದಲು ಗರ್ಭಿಣಿ ಮಹಿಳೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ರಾಜನಹಳ್ಳಿ ಗ್ರಾಮದಲ್ಲಿ ಇಲ್ಲಿಯವರೆಗೆ 57 ಜನರಿಗೆ ಮತ್ತು ನಗರದ ಅಗಸರ ಬಡಾವಣೆ ಮತ್ತು ಶಿವಮೊಗ್ಗ ರಸ್ತೆಯ ಕಂಟೈನ್ ಮೆಂಟ್ ಝೋನ್ ನಲ್ಲಿ ಇಲ್ಲಿಯವರೆಗೆ 98 ಜನರಿಗೆ ಹಾಗೂ ಎ.ಕೆ. ಕಾಲೋನಿಯ ಕಂಟೈನ್ ಮೆಂಟ್ ಝೋನ್ ನಲ್ಲಿ 56 ಜನರು ಸೇರಿ ದಂತೆ ಒಟ್ಟು 245 ಜನರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಂಟೈನ್ ಮೆಂಟ್ ಝೋನ್ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕಮಾಂಡರ್ ಗಳನ್ನು ನೇಮಕ ಮಾಡಲಾಗಿದೆ. ಜೊತೆಯಲ್ಲಿ ನಗರಸಭೆ ಸಿಬ್ಬಂದಿಗಳನ್ನು ಸಹ ನೇಮಿಸಲಾಗಿದೆ.
ನಗರದ ಸ್ವಚ್ಚತಾ ಕಾರ್ಯ ನಿರ್ವಹಿ ಸುವ ಬಗ್ಗೆ ಸ್ಥಳೀಯ ಜನರಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಆತಂಕವನ್ನು ಉಂಟು ಮಾಡಿದೆ. ಕಾರಣ ನಗರದಲ್ಲಿ ಇರುವ ಎ.ಕೆ. ಕಾಲೋನಿಯಲ್ಲಿ ವಾಸವಾಗಿರುವ ಅನೇಕರು ಸ್ಥಳೀಯ ನಗರಸಭೆಯ ಪೌರ ಕಾರ್ಮಿಕರಾಗಿ ನಗರ ಸ್ವಚ್ಚತಾ ಕೆಲಸವನ್ನು ನಿರ್ವಹಣೆ ಮಾಡುತ್ತಿದ್ದು, ಇದೀಗ ಎಲ್ಲರೂ ಸಂಕಷ್ಟದಲ್ಲಿದ್ದಾರೆ.
ಕೊರೊನಾ ಸೋಂಕು ಹರಡಿರುವ ಸ್ಥಳಕ್ಕೆ ಇಂದು ಹರಿಹರ ತಾಲ್ಲೂಕು ನೋಡಲ್ ಅಧಿಕಾರಿ ನಟರಾಜ್, ಜಿಲ್ಲಾ ಆರೋಗ್ಯ ಅಧಿಕಾರಿ ರಾಘವೇಂದ್ರಸ್ವಾಮಿ, ರೇಣುಕಾರಾಧ್ಯ, ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರ ಮೋಹನ್, ಆರೋಗ್ಯ ಅಧಿಕಾರಿಗಳಾದ ಎಸ್.ಎಸ್. ಪಾಟೀಲ್, ಉಮ್ಮಣ್ಣ, ಎಂ.ವಿ. ಹೊರಕೇರಿ, ವಿಮಲಾನಾಯ್ಕ್, ನಗರಸಭೆ ಕೋಡಿ ಭೀಮರಾಯ್ ಮತ್ತಿತರರಿದ್ದರು.