ತೈಲ ಬೆಲೆ ಏರಿಕೆ ಖಂಡಿಸಿ ಇಂದು ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ, ಜೂ. 23- ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಗರದ 25ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳ ಮುಂದೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾ ಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಹೇಳಿದರು.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 130 ಡಾಲರ್ ಇದ್ದರೂ ಸಹ ಪೆಟ್ರೋಲ್ ಬೆಲೆ 80 ರೂ. ದಾಟಿರಲಿಲ್ಲ. ಆದರೆ, ಈಗ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 39 ಡಾಲರ್ ಇದ್ದರೂ, ತೈಲ ಬೆಲೆ ದಿನೇ ದಿನೇ ಏರುತ್ತಲೇ ಇದೆ ಎಂದು ಆರೋಪಿಸಿದರು.

ತೈಲ ಬೆಲೆ ಏರಿಕೆಗೆ ಕಾರಣವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಾಳೆ ಬುಧವಾರ ಬೆಳಿಗ್ಗೆ 11.30ಕ್ಕೆ ನಗರದ 25ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳ ಮುಂದೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಲ್ಲಾ ಘಟಕಗಳು ಪ್ರತಿ ಭಟನೆ ನಡೆಸಲಿವೆ ಎಂದು ಹೇಳಿದರು.

ಸರ್ಕಾರಗಳ ಅವೈಜ್ಞಾನಿಕ ತೆರಿಗೆ ಪದ್ಧತಿಯಿಂದಾಗಿ ತೈಲ ಬೆಲೆ, ಅಡುಗೆ ಅನಿಲದ ಬೆಲೆ ಏರಿಕೆಯಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇದರಿಂದ ಜನ ಸಾಮಾನ್ಯರು ಬದುಕುವುದೇ ದುಸ್ತರವಾಗಿದೆ. ಈಗಾಗಲೇ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಮುಂದೇನಾಗುವುದು ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಚೀನಾ ವಸ್ತುಗಳ ಅಮದು ನಿಲ್ಲಿಸಿ: ದೇಶದ 20ಕ್ಕೂ ಹೆಚ್ಚು ಯೋಧರನ್ನು ಬಲಿ ತೆಗೆದುಕೊಂಡ ಚೀನಾ ವಿರುದ್ಧ ಇಡೀ ದೇಶವೇ ಒಂದಾಗಬೇಕಿದೆ. ಸರ್ಕಾರವೂ ಚೀನಾ ದೇಶದಿಂದ ಅಮದು ಮಾಡಿಕೊಳ್ಳುವ ಎಲ್ಲಾ ವಸ್ತುಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ ದಿನೇಶ್ ಶೆಟ್ಟಿ, ಇಲ್ಲದಿದ್ದರೆ ಚೀನಾ ವಸ್ತುಗಳನ್ನು ಬೀದಿಗೆ ಹಾಕಿ ಬೆಂಕಿ ಹಚ್ಚುವುದಾಗಿ ಹೇಳಿದರು.

ವಿಪಕ್ಷಗಳು ಆರೋಪಿಸಿದ ಮೇಲೆ ನೀರು ಸರಬರಾಜು ಕೇಂದ್ರಕ್ಕೆ ಮೇಯರ್ ಭೇಟಿ ನೀಡಿದ್ದಾರೆ. ಪಾಲಿಕೆಯ ಮೇಯರ್, ಉಪ ಮೇಯರ್, ಆಯುಕ್ತರು ಎಲ್ಲಾ ಅನನುಭವಿಗಳೇ ಆಗಿದ್ದಾರೆ ಎಂದು ಕುಟುಕಿದರು.

ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡುತ್ತಾ, ತೈಲ ಬೆಲೆ ಏರಿಕೆ ಖಂಡಿಸಿ ನಗರ ವ್ಯಾಪ್ತಿಯ ಎಲ್ಲಾ ಪೆಟ್ರೋಲ್ ಬಂಕ್‌ಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಮುಂದಿನ ದಿನ ಸೈಕಲ್ ಚಳವಳಿ, ಎತ್ತಿನ ಗಾಡಿ ಚಳವಳಿಗಳ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದರು.

ತೆರಿಗೆ ಪರಿಷ್ಕರಿಸುವ ವಿಷಯದಲ್ಲಿ ವಿಪಕ್ಷ ಸದಸ್ಯರನ್ನು ವಿಶ್ವಾಸಕ್ಕೆ  ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚಿಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದಿಂದ ಅನುಮತಿಯೂ ಸಿಕ್ಕಿದೆ. ಕೊರೊನಾ ಸಂಕಷ್ಟದಲ್ಲಿ ಜನತೆಗೆ ಹೆಚ್ಚಿನ ತೆರಿಗೆ ಹೊರೆಯಾಗಿದ್ದು ಕೂಡಲೇ ಇದನ್ನು ಕೈ ಬಿಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅನಿತಾಬಾಯಿ ಮಾಲತೇಶ್ ಜಾಧವ್, ಆಶಾ ಮುರಳಿ, ಚಂದ್ರು, ಮಂಜುನಾಥ್, ಹರೀಶ್, ಅಯೂಬ್ ಪೈಲ್ವಾನ್, ಆರೀಫ್ ಖಾನ್, ನಂಜಾನಾಯ್ಕ ಇತರರಿದ್ದರು.

error: Content is protected !!