ಹೊನ್ನಾಳಿ ತಾಲ್ಲೂಕು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ರೇವಣಸಿದ್ದಪ್ಪ ಮನವಿ
ಹೊನ್ನಾಳಿ, ಜೂ.22- ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷ ಶಾಲೆಗಳನ್ನು ಯಾವಾಗ ಪ್ರಾರಂಭಿಸಬೇಕು ಎಂಬ ದಿನಾಂಕವನ್ನೇ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಆದರೆ ಶಿಕ್ಷಣ ಇಲಾಖೆ ಮಾತ್ರ ಆಡಳಿತ ಮಂಡಳಿಗಳಿಂದ ಈಗಾಗಲೇ ಶೇ. 11 ರಷ್ಟು
ಶುಲ್ಕ ಸಂಗ್ರಹಿಸಿದ್ದು, ಈಗ ಪೂರ್ತಿ ಹಣವನ್ನು ತುಂಬಬೇಕು ಎಂದು ಕಳೆದ ಒಂದು ವಾರದಿಂದ ನಿರಂತರ ಒತ್ತಡ ಹೇರುತ್ತಿರುವುದು ಸರಿಯಲ್ಲ. ಸರ್ಕಾರ ಶಾಲಾ ಪ್ರವೇಶ ದಿನಾಂಕವನ್ನು ಮೊದಲು ಪ್ರಕಟಿಸಲಿ, ನಂತರ ಪುಸ್ತಕಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಬೇಕು ಎಂದು ಹೊನ್ನಾಳಿ ತಾಲ್ಲೂಕು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ರೇವಣಸಿದ್ದಪ್ಪ ಹೇಳಿದರು.
ಪಟ್ಟಣದಲ್ಲಿ ನಡೆದ ಹೊನ್ನಾಳಿ ತಾಲ್ಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಕ್ಕೂಟದ ಉಪಾಧ್ಯಕ್ಷ ಎನ್.ಕೆ. ಆಂಜನೇಯ ಮಾತನಾಡಿ, ಸರ್ಕಾರ 10 ವರ್ಷದ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಬೇಡಿ ಎಂದು ಹೇಳುತ್ತಿದೆ. ಅಂದರೆ ಕನಿಷ್ಠ 5 ನೇ ತರಗತಿವರೆಗೂ ಯಾವ ಮಕ್ಕಳನ್ನೂ ಶಾಲೆಗೆ ಸೇರಿಸಿಕೊಳ್ಳಬಾರದು ಎಂದು ಇದರರ್ಥ. ಹಾಗಾದರೆ 1 ರಿಂದ 10 ನೇ ತರಗತಿಗಳವರೆಗಿನ ಪಠ್ಯ ಪುಸ್ತಕದ ಹಣ ಪಾವತಿಸಿ ಎಂದು ಏಕೆ ಒತ್ತಡ ಹೇರುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಹೇಳಿದರು.
ಅಲ್ಲದೇ, ರಾಜ್ಯ ಸರ್ಕಾರ 2019-20ನೇ ಸಾಲಿನ ಆರ್ಟಿಇ ಶುಲ್ಕ ರೂ. 1280 ಕೋಟಿಗೆ ಬದಲು ಕೇವಲ ರೂ. 275 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ರಾಜ್ಯದ ಖಾಸಗಿ ಶಾಲೆಗಳಿಗೆ ಈ ಹಣವನ್ನು ಯಾವ ರೀತಿ ಹಂಚಿಕೆ ಮಾಡುತ್ತಾರೋ ತಿಳಿಯದು. ಜಿಲ್ಲೆಯ ಯಾವುದೇ ಶಾಲೆಗಳಿಗೂ ಒಂದು ನಯಾ ಪೈಸೆಯೂ ಹಣ ಹಂಚಿಕೆ ಮಾಡಿಲ್ಲ ಎಂದು ಹೇಳಿದರು.
ಅರ್ಧದಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ನಾವು ಯಾವ ಧೈರ್ಯದ ಮೇಲೆ ಪುಸ್ತಕಗಳನ್ನು ಖರೀದಿಸಬೇಕು. ಪರೀಕ್ಷೆ ಸಂದರ್ಭದಲ್ಲಿಯೇ ಕೊರೊನಾ ಮಹಾಮಾರಿಯಿಂದಾಗಿ ಕಳೆದ ಸಾಲಿನ ಅರ್ಧದಷ್ಟು ಶುಲ್ಕವೇ ಪೋಷಕರಿಂದ ಬಂದಿಲ್ಲ ಎಂದು ಹೇಳಿದರು.
ದೃಶ್ಯ ಮಾಧ್ಯಮಗಳು ಖಾಸಗಿ ಶಾಲೆಗಳ ಮೇಲೆ ಮನಸೋ ಇಚ್ಛೆ ಆರೋಪ ಮಾಡುವ ಮೂಲಕ ನಡು ಬೀದಿಯಲ್ಲಿ ನಿಲ್ಲಿಸುತ್ತಿವೆ. ಸರ್ಕಾರ ನಮ್ಮ ಕಷ್ಟವನ್ನು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇಸಿಒ ಮುದ್ದನಗೌಡ ಮನವಿ ಸ್ವೀಕರಿಸಿದರು. ಇಸಿಒ ಸಿದ್ದಪ್ಪ ಇದ್ದರು.
ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ವರುಣಾಚಾರಿ, ಖಜಾಂಚಿ ಕೆ. ಪುಟ್ಟಪ್ಪ, ಪದಾಧಿಕಾರಿಗಳಾದ ಹರೀಶ್ ಸಾಗೋನಿ, ಬೆಳಗುತ್ತಿ ಯೋಗೇಶ್ವರಪ್ಪ, ಸುರಹೊನ್ನೆ ಚಂದನಾ, ಕುಳಗಟ್ಟೆ ಸುರೇಶ್, ಗೊಲ್ಲರಹಳ್ಳಿ ಜಯಪ್ಪ ಮತ್ತು ಇತರರು ಇದ್ದರು.